ನವದೆಹಲಿ (ಪಿಟಿಐ): ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಆವರಣದಲ್ಲಿ ಗುಡ್ಡೆ ಬಿದ್ದಿರುವ ವಿಷಯುಕ್ತ ತ್ಯಾಜ್ಯಗಳನ್ನು ಸಾಗಿಸಲು ಆಯ್ಕೆ ಮಾಡಲಾದ ಜರ್ಮನಿಯ ಗಿಜ್ (ಜಿಐಝಡ್) ಕಂಪೆನಿ, ಈ ತ್ಯಾಜ್ಯ ಹೊರಸಾಗಿಸಲು 4,000ದಿಂದ 4,500ರಷ್ಟು ವಿಶೇಷ ಪೆಟ್ಟಿಗೆಗಳು ಬೇಕಾಗುತ್ತವೆ ಎಂದು ಹೇಳಿದೆ.
ಈ ಕುರಿತು ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಗಿಜ್ ಇಂಟರ್‌ನ್ಯಾಷನಲ್‌ನ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಹಾನ್ಸ್ ಎಚ್. ಡ್ಯುಬ್, ವಿಶ್ವಸಂಸ್ಥೆ ನಿಯಮಾವಳಿಗೆ ಅನುಗುಣವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕಾಗುತ್ತದೆ. ಈ ಕೆಲಸಕ್ಕಾಗಿ ವಿಶೇಷ ತರಬೇತಿ ಪಡೆದ 30ಕ್ಕೂ ಹೆಚ್ಚು ಜನ ಬೇಕಾಗುತ್ತಾರೆ ಎಂದು ಹೇಳಿದ್ದಾರೆ.
`ಇದೊಂದು ಅತಿ ಕೌಶಲ್ಯ ಬೇಡುವ ಕೆಲಸ. ನಾವು ಮೊದಲು ಕೆಲಸಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಅವರಿಗೆ ತರಬೇತಿ ನೀಡಬೇಕಾಗುತ್ತದೆ. ಅವರಿಗೆ ವಿಶೇಷ ಮಾಸ್ಕ್, ಉಡುಪು ಮತ್ತಿತರ ಸುರಕ್ಷಾ ಸಲಕರಣೆಗಳನ್ನು ಒದಗಿಸಬೇಕಾಗುತ್ತದೆ.
ಚಳಿಗಾಲದ ಸಮಯದಲ್ಲಿ ರಾತ್ರಿ ವೇಳೆ ಉಷ್ಣಾಂಶ ಕಡಿಮೆ ಇರುವಾಗ ಮಾತ್ರ ತ್ಯಾಜ್ಯಗಳನ್ನು ಪೆಟ್ಟಿಗೆಗೆ ತುಂಬಲು ಸಾಧ್ಯ. ಅಲ್ಲದೇ ಅವರು ಧರಿಸುವ ಉಡುಪಿನಿಂದಾಗಿ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ಸಾಧ್ಯ~ ಎಂದು ಡ್ಯುಬ್ ವಿವರಿಸಿದ್ದಾರೆ.
`ಕನಿಷ್ಠ 90 ಮೆಟ್ರಿಕ್ ಟನ್‌ಗಳಷ್ಟು ತ್ಯಾಜ್ಯ ಪೆಟ್ಟಿಗೆಗೆ ತುಂಬಿದ ಮೇಲೆ ವಿಶೇಷ ವಿಮಾನದಲ್ಲಿ ಅದನ್ನು ಜರ್ಮನಿಯ ಸಂಸ್ಕರಣೆ ಮಾಡುವ ಜಾಗಕ್ಕೆ ಸಾಗಿಸಲಾಗುತ್ತದೆ. ತ್ಯಾಜ್ಯ ವಸ್ತುಗಳನ್ನು ಸ್ಥಳೀಯ ಪರಿಸರಕ್ಕೆ, ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ~ ಎಂದೂ ಅವರು ತಿಳಿಸಿದ್ದಾರೆ.
ಅನಿಲ ಸೋರಿಕೆಯಾಗಿದ್ದ ಆಗಿನ ಯೂನಿಯನ್ ಕಾರ್ಬೈಡ್ ಕಂಪೆನಿ ಆವರಣದಿಂದ 346 ಮೆಟ್ರಿಕ್ ಟನ್‌ಗಳಷ್ಟು ವಿಷಪೂರಿತ ತ್ಯಾಜ್ಯ ವಸ್ತು ಸಾಗಿಸಲು ಸಚಿವರ ಗುಂಪು (ಜಿಎಂಒ) ನಿನ್ನೆಯಷ್ಟೇ ಅನುಮತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.