ADVERTISEMENT

400 ನಕ್ಸಲ್ ನಿಗ್ರಹ ಠಾಣೆಗೆ 120 ಕೋಟಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:30 IST
Last Updated 26 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಭಯೋತ್ಪಾದನೆ ನಿಗ್ರಹಕ್ಕಾಗಿ ರೂಪಿಸಿದ `ಎನ್‌ಸಿಟಿಸಿ~ ಪ್ರಸ್ತಾವನೆಗೆ ಕಾಂಗ್ರೆಸ್‌ಯೇತರ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಬಹುತೇಕ ಈ ರಾಜ್ಯಗಳ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ 400 ಸುಸಜ್ಜಿತ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ರೂ 120 ಕೋಟಿಗಳ ನೆರವು ಪ್ರಕಟಿಸಿ, ಪ್ರಥಮ ಕಂತು ಬಿಡುಗಡೆ ಮಾಡಿದೆ.

ಇದರ ಭಾಗವಾಗಿ ಗೃಹ ಸಚಿವಾಲಯದ ಭದ್ರತೆ ಮೇಲಿನ ಸಂಪುಟ ಸಮಿತಿಯು 83 ಅತಿ ನಕ್ಸಲ್‌ಪೀಡಿತ ಜಿಲ್ಲೆಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ 400 ಸುಸಜ್ಜಿತ ಪೊಲೀಸ್ ಠಾಣೆಗಳನ್ನು ತಲಾ ರೂ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿದೆ. ಈಗಾಗಲೇ ಒಂಬತ್ತು ನಕ್ಸಲ್‌ಪೀಡಿತ ರಾಜ್ಯಗಳಿಗೆ ತಲಾ ರೂ 30 ಲಕ್ಷದಂತೆ ಒಟ್ಟು ರೂ 120 ಕೋಟಿ ಬಿಡುಗಡೆಗೊಳಿಸಿದೆ.

ಈ ಯೋಜನೆಯ ಲಾಭ ಪಡೆದಿರುವ ನಕ್ಸಲ್‌ಪೀಡಿತ ರಾಜ್ಯಗಳೆಂದರೆ, ಬಿಹಾರ (85 ಪೊಲೀಸ್ ಠಾಣೆ), ಜಾರ್ಖಂಡ್ (75), ಒಡಿಶಾ (70), ಆಂಧ್ರ (40) ಪ. ಬಂಗಾಳ (18), ಉತ್ತರ ಪ್ರದೇಶ 15, ಮಧ್ಯಪ್ರದೇಶ (12), ಮಹಾರಾಷ್ಟ್ರ (10) ಸೇರಿವೆ.

ಎನ್‌ಸಿಟಿಸಿಯನ್ನು ವಿರೋಧಿಸಿದ್ದ ಕಾಂಗ್ರೆಸ್‌ಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮನೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಪ್ರತ್ಯೇಕ ಪತ್ರ ಬರೆದು ಹೊಸ ಭಯೋತ್ಪಾದನೆ ನಿಗ್ರಹ ಪ್ರಸ್ತಾವದ ಬಗ್ಗೆ ಆತಂಕ ಬೇಡ ಎಂದು ತಿಳಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.