ADVERTISEMENT

43 ಲಕ್ಷ ಅಂಗನವಾಡಿ ಮಕ್ಕಳಿಗೆ ಸ್ಥೂಲಕಾಯ: ಸಮೀಕ್ಷೆ

ಪಿಟಿಐ
Published 17 ಸೆಪ್ಟೆಂಬರ್ 2023, 16:33 IST
Last Updated 17 ಸೆಪ್ಟೆಂಬರ್ 2023, 16:33 IST
   

ನವದೆಹಲಿ: 0-5 ವಯೋಮಾನದ 43 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಧಿಕ ತೂಕ ಇರುವುದನ್ನು ಕಳೆದ ತಿಂಗಳು ಗುರುತಿಸಲಾಗಿದೆ. ದೇಶದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಸಮೀಕ್ಷೆಗೆ ಒಳಗಾದ ಮಕ್ಕಳ ಪೈಕಿ ಶೇಕಡ 6 ರಷ್ಟು ಮಕ್ಕಳು ಸ್ಥೂಲಕಾಯ ಹೊಂದಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.‌

ಸರ್ಕಾರಿ ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ, ಸ್ಥೂಲಕಾಯ ಅಥವಾ ಅಧಿಕ ತೂಕದ ಮಕ್ಕಳ ಪ್ರಮಾಣ ಶೇ 6ರಷ್ಟಿದೆ; ತೀವ್ರ ಮತ್ತು ಮಧ್ಯಮ ಪ್ರಮಾಣದ ಅಪೌಷ್ಟಿಕತೆ ಇರುವ ಮಕ್ಕಳ ಪ್ರಮಾಣವೂ ಇಷ್ಟೇ ಇದೆ ಎಂದು ತಿಳಿಸಿದೆ. 

0-5 ವರ್ಷ ವಯಸ್ಸಿನ 7.24 ಕೋಟಿ ಮಕ್ಕಳಲ್ಲಿ ಸರಿಸುಮಾರು ಆರು ಪ್ರತಿಶತ ಅಥವಾ 43.47 ಲಕ್ಷ ಮಕ್ಕಳು ಸ್ಥೂಲಕಾಯ ಅಥವಾ ಅಧಿಕ ತೂಕ ಹೊಂದಿದ್ದಾರೆ ಎಂದು ವರ್ಗೀಕರಿಸಿರುವುದಾಗಿ ಬೆಳವಣಿಗೆ ಮೇಲ್ವಿಚಾರಣಾ ಆ್ಯಪ್ ‘ಪೋಷಣ್ ಟ್ರ್ಯಾಕರ್’ ಸಂಗ್ರಹಿಸಿದ ದತ್ತಾಂಶದಲ್ಲಿ ತಿಳಿಸಲಾಗಿದೆ. 

ADVERTISEMENT

ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಕ್ಕಳ ಸ್ಥೂಲಕಾಯ ಪ್ರಮಾಣವು ರಾಷ್ಟ್ರೀಯ ಸರಾಸರಿ ಆರು ಪ್ರತಿಶತಕ್ಕಿಂತ ಹೆಚ್ಚಾಗಿದೆ.  

2021ರಲ್ಲಿ ‘ಪೋಷಣ್ ಟ್ರ್ಯಾಕರ್’ ಪ್ರಾರಂಭವಾಗುವ ಮೊದಲು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ಅಡಿ  ದತ್ತಾಂಶ ಸಂಗ್ರಹಿಸಲಾಗುತ್ತಿತ್ತು.

ಎನ್ಎಫ್ಎಚ್ಎಸ್ -4 (2015-16) ಮತ್ತು ಎನ್ಎಫ್ಎಚ್ಎಸ್ -5 (2019-21) ಅಂಕಿ ಅಂಶದ ಪ್ರಕಾರ, ಎನ್ಎಫ್ಎಚ್ಎಸ್ -4ಗೆ ಹೋಲಿಸಿದರೆ ಎನ್ಎಫ್ಎಚ್ಎಸ್ -5ರಲ್ಲಿ ಅಧಿಕ ಹೆಚ್ಚು ತೂಕ ಹೊಂದಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಶೇಕಡವಾರು ಗಮನಾರ್ಹವಾಗಿ ಹೆಚ್ಚಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.