ಚಾಯ್ಬಸಾ, ಜಾರ್ಖಂಡ್ : ‘ಇಲ್ಲಿನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ 26 ವರ್ಷದ ಮಹಿಳೆ ಮೇಲೆ ಸುಮಾರು 10 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣ ಸಂಬಂಧ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನವರು ಇದ್ದಾರೆ’ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
‘ಘಟನಾ ಸ್ಥಳದ ಸುತ್ತ ಪರಿಶೀಲನೆ ನಡೆಸಿದ್ದವಿಶೇಷತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು, ಸ್ಥಳೀಯರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಅವರು ನೀಡಿದ್ದ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಮಹಿಳೆಯ ಮೊಬೈಲ್ ಹಾಗೂ ಪರ್ಸ್ ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಶುತೋಷ್ ಶೇಖರ್ ಹೇಳಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಮಹಿಳೆಯು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯು ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದ್ದರಿಂದಾಗಿ ಊರಿಗೆ ಹೋಗಿದ್ದರು. ಗುರುವಾರ ಸಂಜೆ ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ಹಳೆ ವಿಮಾನ ನಿಲ್ದಾಣಕ್ಕೆ ತೆರಳಿದ್ದ ವೇಳೆ 8 ರಿಂದ 10 ಮಂದಿಯ ಗುಂಪು ಅವರಿಬ್ಬರನ್ನು ತಡೆದು ಸ್ನೇಹಿತನನ್ನು ಥಳಿಸಿತ್ತು. ಬಳಿಕ ಮಹಿಳೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.