ADVERTISEMENT

ಅಸ್ಸಾಂ: 1.9 ಕೋಟಿ ಜನ ಅಧಿಕೃತ ಪ್ರಜೆಗಳು

ಪಿಟಿಐ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಕರಡಿನಲ್ಲಿ ತಮ್ಮ ಹೆಸರು ನೋಡಲು ಸರದಿ ಸಾಲಿನಲ್ಲಿ ನಿಂತ ಜನ
ಕರಡಿನಲ್ಲಿ ತಮ್ಮ ಹೆಸರು ನೋಡಲು ಸರದಿ ಸಾಲಿನಲ್ಲಿ ನಿಂತ ಜನ   

ಗುವಾಹಟಿ: ಬಾಂಗ್ಲಾದೇಶದ ಗಡಿಯಿಂದ ಅಕ್ರಮವಾಗಿ ಅಸ್ಸಾಂ ಪ್ರವೇಶಿಸಿದವರನ್ನು ಪತ್ತೆ ಹಚ್ಚುವ ಸಲುವಾಗಿ ರೂಪಿಸಿದ್ದ ಬಹುನಿರೀಕ್ಷಿತ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಮೊದಲ ಕರಡು ಬಿಡುಗಡೆಗೊಂಡಿದೆ.

ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸಿದ್ದ 3.29 ಕೋಟಿ ಜನರಲ್ಲಿ 1.9 ಕೋಟಿ ಜನರು ಅಧಿಕೃತವಾಗಿ ಭಾರತೀಯ ಪೌರತ್ವ ಹೊಂದಿದ್ದಾರೆ ಎಂದು ಕರಡಿನಲ್ಲಿ ಗುರುತಿಸಲಾಗಿದೆ. ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆ ಮೇಲೆ ನಿಗಾವಹಿಸಿತ್ತು.

ಭಾನುವಾರ ತಡರಾತ್ರಿ ಬಿಡುಗಡೆಗೊಂಡ ಕರಡಿನಲ್ಲಿ ತಮ್ಮ ಹೆಸರು ಇದೆಯೆ ಎಂದು ಪರಿಶೀಲಿಸಲು ಸೋಮವಾರ ಬೆಳಿಗ್ಗೆಯಿಂದಲೇ ಅಸ್ಸಾಂನಲ್ಲಿನ ಸೇವಾಕೇಂದ್ರಗಳಲ್ಲಿ ಜನರು ಸಾಲುಗಟ್ಟಿದ್ದರು.

ADVERTISEMENT

‘ಯಾರೂ ಸಹ ಆತಂಕಪಡುವುದು ಬೇಡ. ಉಳಿದ ಹೆಸರುಗಳು ಪರಿಶೀಲನೆಯ ವಿವಿಧ ಹಂತಗಳಲ್ಲಿವೆ. ಸುಪ್ರೀಂ ಕೋರ್ಟ್‌ ಮಾರ್ಗದರ್ಶನದ ಅನುಸಾರ ನಾವು ಮುಂದಿನ ಕರಡು ಬಿಡುಗಡೆಗೊಳಿಸುತ್ತೇವೆ. ದೋಷರಹಿತ ಕರಡು ಪ್ರಕಟಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ವರ್ಷಾಂತ್ಯದಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ’ ಎಂದು ಭಾರತದ ಮಹಾನೋಂದಣಿ ಅಧಿಕಾರಿ ಶೈಲೇಶ್ ತಿಳಿಸಿದ್ದಾರೆ.

ಈ ಹಿಂದೆ ಕೊನೆಯ ಬಾರಿಗೆ 1951ರಲ್ಲಿ ಅಸ್ಸಾಂನಲ್ಲಿ ಎನ್‌ಆರ್‌ಸಿ ಪರಿಷ್ಕರಿಸಲಾಗಿತ್ತು. ನಂತರದಲ್ಲಿ ವಲಸಿಗರನ್ನು ಪತ್ತೆ ಹಚ್ಚುವ ಈ ಪ್ರಕ್ರಿಯೆ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿತ್ತು.

‘ವಿಶ್ವದಲ್ಲಿ ಯಾವುದಾದರೂ ದೇಶದಲ್ಲಿ ಪೌರತ್ವ ಪತ್ತೆಹಚ್ಚಲು ಎನ್‌ಆರ್‌ಸಿ ರೀತಿಯ ಸಂಕೀರ್ಣ ಕ್ರಮ ಐಅನುಸರಿಸಲಾಗಿದೆಯೇ ಎಂದು ನನಗೆ ಶಂಕೆ ಇದೆ’ ಎಂದು ಅವರು ಹೇಳಿದ್ದಾರೆ.

2013ರ ಡಿಸೆಂಬರ್‌ನಲ್ಲಿ ಈ ಎನ್‌ಆರ್‌ಸಿ ಪ್ರಕ್ರಿಯೆ ಆರಂಭಗೊಂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ 40 ಬಾರಿ ವಿಚಾರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.