ADVERTISEMENT

ಭಾರತದ ವಿರುದ್ಧ ಜಿಹಾದ್‌ಗೆ ‘ಬಾಲ’ ಉಗ್ರನ ಕರೆ

ಸಿಆರ್‌ಪಿಎಫ್‌ ಕೇಂದ್ರದ ಮೇಲೆ ದಾಳಿ ನಡೆಸಿದ ಉಗ್ರರಲ್ಲಿ 16 ವರ್ಷದ ಬಾಲಕ

ಪಿಟಿಐ
Published 1 ಜನವರಿ 2018, 19:32 IST
Last Updated 1 ಜನವರಿ 2018, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ‘ಈ ವಿಡಿಯೊ ಬಿಡುಗಡೆಯಾಗುವ ಹೊತ್ತಿಗೆ ನಾನು ಸ್ವರ್ಗದಲ್ಲಿ ಅತಿಥಿಯಾಗಿರುತ್ತೇನೆ’ –ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿರುವ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೇಂದ್ರದ ಮೇಲೆ ಭಾನುವಾರ ದಾಳಿ ನಡೆಸಿದ್ದ ಮೂವರು ಉಗ್ರರ ಪೈಕಿ 16 ವರ್ಷದ ಆತ್ಮಾಹುತಿ ದಾಳಿಕೋರನ ಹೇಳಿಕೆ ಇದು.

ದಾಳಿಗೂ ಮುನ್ನ ಆತ ಸ್ವಯಂ ಆಗಿ ಚಿತ್ರೀಕರಿಸಿದ್ದ ವಿಡಿಯೊ ತುಣುಕನ್ನು ಭಯೋತ್ಪಾದಕ ಸಂಘಟನೆ ಜೈಷ್‌–ಇ– ಮೊಹಮ್ಮದ್‌ (ಜೆಇಎಂ) ಸೋಮವಾರ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾರತದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ಕಾಶ್ಮೀರ ಯುವಜನರಿಗೆ ಆತ ಕರೆ ನೀಡಿದ್ದಾನೆ.

ADVERTISEMENT

ಪೊಲೀಸ್‌ ಕಾನ್‌ಸ್ಟೆಬಲ್‌ ಮಗನಾಗಿರುವ 16 ವರ್ಷದ ಉಗ್ರನ ಹೆಸರು ಫರ್ದೀನ್‌ ಅಹ್ಮದ್‌ ಖಾಂಡೆ. ಭಾನುವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಸಂದರ್ಭ ಇತರ ಇಬ್ಬರು ಉಗ್ರರೊಂದಿಗೆ ಇವನೂ ಪ್ರಾಣಕಳೆದುಕೊಂಡಿದ್ದ.

ಭಾನುವಾರ ಮುಂಜಾವಿನಲ್ಲಿ ಸಿಆರ್‌ಪಿಎಫ್‌ ಕೇಂದ್ರದ ಮೇಲೆ ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಇಬ್ಬರು ಗಾಯಗೊಂಡಿದ್ದರು.

ಮೂರು ಅತ್ಯಾಧುನಿಕ ರೈಫಲ್‌ಗಳು, ಗ್ರೆನೇಡ್‌ಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳ  ನಡುವೆ ಸಂವಹನ ಸಾಧನಗಳೊಂದಿಗೆ ಕುಳಿತು ಆತ ಮಾತನಾಡುವ ದೃಶ್ಯ ವಿಡಿಯೊದಲ್ಲಿದೆ.‘ಕಾಶ್ಮೀರ ಯುವಜನರು ಭಯೋತ್ಪಾದನೆಯ ದಾರಿ ಹಿಡಿಯಲು ನಿರುದ್ಯೋಗವೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಇದು ಕೇವಲ ಅಪಪ್ರಚಾರ’ ಎಂದು ಫರ್ದೀನ್‌ ವಿಡಿಯೊದಲ್ಲಿ ಹೇಳಿದ್ದಾನೆ.

‘ಕಾಫಿರರ (ಧರ್ಮದ ಮೇಲೆ ನಂಬಿಕೆ ಇಲ್ಲದವರು) ವಿರುದ್ಧ ಮುಸ್ಲಿಮರು ಹೋರಾಡಬೇಕು ಎಂದು ಕರೆ ನೀಡಿರುವ ಆತ, ‘ಮುಸ್ಲಿಂ ಆದವನಿಗೆ ಜಿಹಾದ್‌ ಕೂಡ ಕಡ್ಡಾಯ. ಕಾಶ್ಮೀರ ಯುವಜನರು ಅದಕ್ಕೆ ಸೇರಬೇಕು. ಕಾಫಿರರು ನಮ್ಮ ನೆಲವನ್ನು ಆಕ್ರಮಿಸಿಕೊಂಡು, ನಮ್ಮ ಮಹಿಳೆಯರ ಗೌರವಕ್ಕೆ ಬೆದರಿಕೆ ಒಡ್ಡುವಾಗ ಜಿಹಾದ್‌ನ ಪ್ರಾಮುಖ್ಯ ಇನ್ನಷ್ಟು ಹೆಚ್ಚುತ್ತದೆ’ ಎಂದಿದ್ದಾನೆ.

‘ನನ್ನ ಸ್ನೇಹಿತರೇ, ಕುರ್‌ ಅನ್‌ ನೀಡಿರುವ ಕರೆಯನ್ನು ನಾನು ಆಲಿಸಿದ್ದೇನೆ ಮತ್ತು ಜಿಹಾದ್‌ನ ಸಮರಕ್ಷೇತ್ರಕ್ಕೆ ಧುಮುಕಿದ್ದೇನೆ. ಕಾಶ್ಮೀರದಲ್ಲಿ ಕೊನೆಯ ಸೈನಿಕ ಇರುವವರೆಗೆ ಇದು ಮುಂದುವರಿಯಲಿದೆ’ ಎಂದು ಉಗ್ರ ವಿಡಿಯೊದಲ್ಲಿ ಹೇಳಿದ್ದಾನೆ. ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ಹಿಜ್ಬುಲ್‌ ಕಮಾಂಡರ್‌ ಬುರ್ಹಾನ್ ವಾನಿಯ ಊರು ತ್ರಾಲ್‌ ಗ್ರಾಮದವನಾದ ಫರ್ದೀನ್‌ ಮೂರು ತಿಂಗಳ ಹಿಂದೆಯಷ್ಟೇ ಉಗ್ರ ಸಂಘಟನೆ ಸೇರಿದ್ದ.

ಸಿಆರ್‌ಪಿಎಫ್‌ ಕಾರ್ಯಾಚರಣೆ ಅಂತ್ಯ
ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರದ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ನಡೆಸಿದ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರ್ಯಚರಣೆಯಲ್ಲಿ ಮೂರನೇ ಉಗ್ರನ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ.ವೈದಾ ಹೇಳಿದರು. ಭಾನುವಾರ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿತ್ತು.

ಉಗ್ರರು ಭಾನುವಾರ ನಡೆಸಿದ ದಾಳಿಯಲ್ಲಿ ಐವರು ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು, 3 ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನದ ಜೈಷ್‌–ಎ–ಮೊಹಮದ್‌ ಸಂಘಟನೆ ದಾಳಿ ಹೊಣೆ ಹೊತ್ತುಕೊಂಡಿದೆ.

ಉಗ್ರರ ನೇಮಕ ಅಬಾಧಿತ
ನವದೆಹಲಿ: ಕಾಶ್ಮೀರ ಕಣಿವೆಯ ಯುವಜನರು ಭಯೋತ್ಪಾದಕ ಸಂಘಟನೆಗಳತ್ತ ವಾಲುವುದನ್ನು ತಡೆಯುವುದು, ಹೊಸ ವರ್ಷದಲ್ಲಿ ಭದ್ರತಾ ಪಡೆಗಳ ಮುಂದಿರುವ ಬಹುದೊಡ್ಡ ಸವಾಲು.

2017ರಲ್ಲಿ ಸ್ಥಳೀಯರು ಸೇರಿದಂತೆ 200ಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದರೂ, ಡಿಸೆಂಬರ್‌ ಆರಂಭದವರೆಗೆ 117 ಯುವಕರು ಉಗ್ರ ಸಂಘಟನೆ ಸೇರಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇನ್ನೂ 25–30 ಸ್ಥಳೀಯರನ್ನು ಉಗ್ರ ಸಂಘಟನೆಗಳು ಸೆಳೆದಿವೆ ಎನ್ನಲಾಗುತ್ತಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ.ಭಾನುವಾರ ಸಿಆರ್‌ಪಿಎಫ್‌ ಕೇಂದ್ರದ ಮೇಲೆ ದಾಳಿ ನಡೆಸಿದ ಎಲ್ಲ ಉಗ್ರರು ಸ್ಥಳೀಯರೇ.

ಉಗ್ರರ ಬಹುತೇಕ ನೇಮಕಾತಿಗಳು ದಕ್ಷಿಣ ಕಾಶ್ಮೀರ ಜಿಲ್ಲೆಗಳಾದ ಪುಲ್ವಾಮಾ, ಶೋಪಿಯಾನ್‌, ಕುಲ್‌ಗಾಮ್‌ ಮತ್ತು ಅನಂತ್‌ನಾಗ್‌ನಲ್ಲಿ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.