ADVERTISEMENT

ಮದರಸಾಗಳ ವಾರ್ಷಿಕ ರಜೆ ಕಡಿತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಮದರಸಾಗಳ ವಾರ್ಷಿಕ ರಜೆ ಕಡಿತ
ಮದರಸಾಗಳ ವಾರ್ಷಿಕ ರಜೆ ಕಡಿತ   

ಲಖನೌ: ಉತ್ತರ ಪ್ರದೇಶ ಸರ್ಕಾರ ಮದರಸಾಗಳ ವಾರ್ಷಿಕ ರಜೆಗಳನ್ನು ಕಡಿತಗೊಳಿಸಿದೆ. ಜತೆಗೆ ಹಿಂದೂ ಹಾಗೂ ಇತರೆ ಧರ್ಮಗಳ ಹಬ್ಬಗಳಿಗೆ ಮದರಸಾಗಳು ರಜೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಮದರಸಾಗಳಿಗೆ ಜಾರಿಗೊಳಿಸಿರುವ ನೂತನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ವಾರ್ಷಿಕ ರಜೆಗಳ ಸಂಖ್ಯೆ 92ರಿಂದ 86ಕ್ಕೆ ಇಳಿಕೆಯಾಗಿದೆ. ವಾರ್ಷಿಕ ಈದ್‌ ರಜೆಯನ್ನು 46ರಿಂದ 42 ದಿನಗಳಿಗೆ ಇಳಿಸಲಾಗಿದೆ. ಚಳಿಗಾಲದ ರಜೆ 13ರಿಂದ 10 ದಿನಗಳಿಗೆ ಇಳಿಕೆಯಾಗಿದೆ. ವಾರದ ರಜೆ ಶುಕ್ರವಾರವೇ ಇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮದರಸಾಗಳು ಹಾಗೂ ಇತರೆ ಶಾಲೆಗಳ ಶಿಕ್ಷಣದಲ್ಲಿ ಏಕರೂಪತೆ ತರುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಇದು ತಮ್ಮ ವಿರುದ್ಧದ ತಾರತಮ್ಯ ಎಂದು ಮದರಸಾಗಳು ಹೇಳಿವೆ. ಮದರಸಾಗಳಿಗೆ ಪ್ರತ್ಯೇಕವಾಗಿದ್ದ ರಜೆಗಳನ್ನು ರದ್ದುಗೊಳಿಸಬಾರದು’ ಎಂದು ಸ್ಥಳೀಯ ಮದರಸಾದ ನಿರ್ವಾಹಕರೊಬ್ಬರು ಹೇಳಿದ್ದಾರೆ.

ADVERTISEMENT

ಹೋಳಿ, ದೀಪಾವಳಿ, ದಸರಾ, ರಕ್ಷಾಬಂಧನ, ಬುದ್ಧಪೂರ್ಣಿಮ, ಮಹಾವೀರ ಜಯಂತಿಗಳಂದು ಮದರಸಾಗಳಿಗೆ ರಜೆ ಇರಲಿದೆ. ಮದರಸಾಗಳು ಏಕಕಾಲಕ್ಕೆ ತರಗತಿಗಳನ್ನು ನಡೆಸಬೇಕೆಂದು ಸರ್ಕಾರ ಇದೇ ವೇಳೆ ಸೂಚನೆ ನೀಡಿದೆ.

ದಾಖಲೆ ಸಲ್ಲಿಸದ 2300 ಮದರಸಾಗಳ ಮಾನ್ಯತೆ ರದ್ದು ಸಂಭವ

ಉತ್ತರ ಪ್ರದೇಶದಲ್ಲಿನ 2,300 ಮದರಸಾಗಳು ದಾಖಲೆ ಸಲ್ಲಿಸದೆ ಇರುವುದರಿಂದ ಅವುಗಳ ಮಾನ್ಯತೆ ರದ್ದುಪಡಿಸಿ ನಕಲಿ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ತಿಳಿಸಿದ್ದಾರೆ.

ರಾಜ್ಯ ಮದರಸಾ ಮಂಡಳಿ 19,108 ಮದರಸಾಗಳಿಗೆ ಮಾನ್ಯತೆ ನೀಡಿದೆ. ಈ ಪೈಕಿ 16,808 ಮದರಸಾಗಳು ಮಂಡಳಿಯ ವೆಬ್‌ಸೈಟ್‌ಗೆ ತಮ್ಮ ದಾಖಲೆಗಳನ್ನು ಸಲ್ಲಿಸಿವೆ. ಉಳಿದ ‌2,300 ಮದರಸಾಗಳು ವಿವರ ಸಲ್ಲಿಸಿಲ್ಲ. ಈ ತಿಂಗಳ ಅಂತ್ಯದ ಒಳಗೆ ಮಾಹಿತಿ ನೀಡಿದೆ ಇದ್ದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಚೌಧರಿ ಹೇಳಿದ್ದಾರೆ.

ಮದರಸಾಗಳು ಸೂಕ್ತ ಶಿಕ್ಷಣ ಪದ್ಧತಿ ಅನುಸರಿಸುತ್ತಿವೆಯೇ ಎಂಬುದನ್ನು ನೋಡಿಕೊಳ್ಳುವುದಷ್ಟೆ ಸರ್ಕಾರದ ಗುರಿ. ಆದರೆ, ವಿರೋಧ ಪಕ್ಷಗಳು ಈ ವಿಷಯಕ್ಕೆ ರಾಜಕೀಯ ತಿರುವು ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಮಾನ್ಯತೆ ಹೊಂದಿರುವ ಮದರಸಾದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಬಿಗಿಯಾದ ಬುರ್ಖಾ ಧರಿಸುವುದು ಇಸ್ಲಾಂ ವಿರೋಧಿ: ದಾರುಲ್‌ ಉಲೂಮ್‌ ಫತ್ವಾ

ಬಿಗಿಯಾದ ಮತ್ತು ಆಧುನಿಕ ವಿನ್ಯಾಸದ ಬುರ್ಖಾ ತೊಡುವುದು ಇಸ್ಲಾಂ ತತ್ವಗಳಿಗೆ ವಿರುದ್ಧವಾದುದು ಎಂದು ಉತ್ತರಪ್ರದೇಶದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್‌ ಉಲೂಮ್‌ ದೇವಬಂದ್‌ ಫತ್ವಾ ಹೊರಡಿಸಿದೆ.

ಪುರುಷರನ್ನು ತಮ್ಮೆಡೆಗೆ ಆಕರ್ಷಿಸುವಂತಹುದನ್ನು ಮಾಡಲು ಇಸ್ಲಾಂ ಅವಕಾಶ ಕೊಡುವುದಿಲ್ಲ ಎಂದು ಫತ್ವಾ ಹೇಳಿದೆ. ‘ಬಿಗಿಯಾದ ಮತ್ತು ಆಧುನಿಕ ವಿನ್ಯಾಸದ ಬುರ್ಖಾಗಳು ಮಹಿಳೆಯ ದೇಹವನ್ನು ಪ್ರದರ್ಶಿಸುತ್ತವೆ. ಆ ಮೂಲಕ ಪುರುಷರನ್ನು ಆಕರ್ಷಿಸುತ್ತವೆ. ಹಾಗಾಗಿ ಮಹಿಳೆಯರು ಇದನ್ನು ಧರಿಸಬಾರದು’ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದೆ.

ಶಿಕ್ಷಣ ಸಂಸ್ಥೆಯ ಫತ್ವಾ ಹೊರಡಿಸುವ ವಿಭಾಗ ‘ದಾರುಲ್ ಇಫ್ತಾ’, ಧಾರ್ಮಿಕ ಕಟ್ಟಳೆಗಳ ಅನುಸಾರ ದೇಹವನ್ನು ಮುಚ್ಚಿಕೊಳ್ಳಲು ಮತ್ತು ಪುರುಷರ ಗಮನ ಸೆಳೆಯದಿರಲು ಬುರ್ಖಾ ತೊಡಲಾಗುತ್ತದೆ. ಮಹಿಳೆಯರು ಅನವಶ್ಯಕವಾಗಿ ಮನೆಯಿಂದ ಹೊರ ಹೋಗಬಾರದು. ದೇಹದ ಯಾವ ಭಾಗವೂ ಕಾಣದಂತೆ ಉಡುಪು ಧರಿಸಿರಬೇಕು’ ಎಂದು ತಿಳಿಸಿದೆ

ಪರ–ವಿರೋಧ ಪ್ರತಿಕ್ರಿಯೆ

‘ಫತ್ವಾದಲ್ಲಿ ಹೇಳಿರುವುದು ಸರಿ ಇದೆ. ಬಿಗಿಯಾದ ಮತ್ತು ವಿನ್ಯಾಸದ ಬುರ್ಖಾಗಳನ್ನು ಧರಿಸಬಾರದು’ ಎಂದು ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷೆ ಶಾಹಿಸ್ತಾ ಅಂಬರ್‌ ಪ್ರತಿಕ್ರಿಯಿಸಿದ್ದಾರೆ.

‘ಈ ರೀತಿಯ ಫತ್ವಾ ಹೊರಡಿಸುವ ಅಗತ್ಯವಿಲ್ಲ. ಇದು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮುಸ್ಲಿಂ ಸಮುದಾಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ’ ಎಂದು ಮಹಿಳಾಪರ ಹೋರಾಟಗಾರ್ತಿ ನಯಿಷ್ ಹಸನ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.