ADVERTISEMENT

‘ಮೋದಿ ರಾಜಕಾರಣ, ಜೇಟ್ಲಿ ಜ್ಞಾನದ ಫಲ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
‘ಮೋದಿ ರಾಜಕಾರಣ, ಜೇಟ್ಲಿ  ಜ್ಞಾನದ ಫಲ’
‘ಮೋದಿ ರಾಜಕಾರಣ, ಜೇಟ್ಲಿ ಜ್ಞಾನದ ಫಲ’   

ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಲು ಪ್ರಧಾನಿ ನರೇಂದ್ರ ಮೋದಿಯವರ ‘ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್’ (ಸಮಗ್ರ ಒಡೆದಾಳುವ ರಾಜಕಾರಣ) ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

2017–18ನೇ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 6.5ರಷ್ಟು ಇರಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಇದು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲೇ ಅತ್ಯಂತ ಕಡಿಮೆ ಎಂದು ಟೀಕಿಸಿ ರಾಹುಲ್ ಮತ್ತು ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಪಿ.ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಜಿಎಸ್‌ಟಿಯನ್ನು ‘ಗಬ್ಬರ್‌ ಸಿಂಗ್ ಟ್ಯಾಕ್ಸ್’ ಎಂದೂ, ‘ಮೇಕ್‌ ಇನ್‌ ಇಂಡಿಯಾ’ವನ್ನು ‘ಫೇಕ್‌ ಇನ್‌ ಇಂಡಿಯಾ’ ಎಂದು ಟೀಕಿಸಿದ್ದ ರಾಹುಲ್ ಈಗ ‘ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್‌–ಜಿಡಿಪಿ‘ಯನ್ನು ‘ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್’ ಎಂದು ಹೀಯಾಳಿಸಿದ್ದಾರೆ.

ADVERTISEMENT

ದೇಶದ ಆರ್ಥಿಕ ಪ್ರಗತಿ ಕುಂಠಿತದಲ್ಲಿ ‘ಅರುಣ್ ಜೇಟ್ಲಿಯವರ ಜ್ಞಾನ ಮತ್ತು ಮಿಸ್ಟರ್ ಮೋದಿಯವರ ‘ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್‌’ ಎರಡೂ ಸೇರಿವೆ ಎಂದು ಅವರು ಲೇವಡಿ ಮಾಡಿದ್ದಾರೆ.

ಭಾರತಕ್ಕೆ 13 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಂಡವಾಳ ಹೂಡಿಕೆ, 63 ವರ್ಷಗಳಲ್ಲೇ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯದಲ್ಲಿ ಅತ್ಯಂತ ಕಡಿಮೆ ಪ್ರಗತಿ, 8 ವರ್ಷಗಳಲ್ಲೇ ಅತ್ಯಂತ ಕಡಿಮೆ ಉದ್ಯೋಗ ಸೃಷ್ಟಿ, 8 ವರ್ಷಗಳಲ್ಲೇ ಅತ್ಯಂತ ಹೆಚ್ಚು ಆರ್ಥಿಕ ಬಿಕ್ಕಟ್ಟು ಮತ್ತು ಸ್ಥಗಿತಗೊಂಡ ಯೋಜನೆಗಳನ್ನು ಈ ಇಬ್ಬರೂ ಕೊಡುಗೆಯಾಗಿ ನೀಡಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

‘ನಮ್ಮ ಆತಂಕ ಮತ್ತು ನಾವು ನೀಡಿದ ಎಚ್ಚರಿಕೆಗಳು ನಿಜವಾಗುತ್ತಿವೆ. ನೀವು ನೀಡುತ್ತಿರುವ ಜಿಡಿಪಿ ಸಂಖ್ಯೆಗಳೇ ಆರ್ಥಿಕತೆ ಕುಂಠಿತವಾಗಿದೆ ಎಂಬುದನ್ನು ಸಾಬೀತು ಮಾಡುತ್ತಿವೆ’ ಎಂದು ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

‘ಇಷ್ಟು ಕಡಿಮೆ ಮಟ್ಟದ ಆರ್ಥಿಕ ಬೆಳವಣಿಗೆ ಇಟ್ಟುಕೊಂಡು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತೀರಿ? ನೀವು ಭರವಸೆ ನೀಡಿದಂತೆ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತೀರಿ? ಭಾರತ ಪ್ರಗತಿ ಸದೃಢವಾಗೇ ಇದೆ ಎಂದು ಸರ್ಕಾರ ಇನ್ನೂ ಹೇಳಿಕೊಳ್ಳುತ್ತದೆಯೇ?’ ಎಂದು ಚಿದಂಬರಂ ಮತ್ತೊಂದು ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.