ADVERTISEMENT

ಪ್ರೌಢಶಿಕ್ಷಣಕ್ಕೂ ಆರ್‌ಟಿಇ: ಶೀಘ್ರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು (ಆರ್‌ಟಿಇ) ಕಾಯ್ದೆಯನ್ನು ಪ್ರೌಢ ಶಿಕ್ಷಣಕ್ಕೂ ವಿಸ್ತರಿಸಬೇಕು ಎಂಬ ಬೇಡಿಕೆ ಬಗ್ಗೆ ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ) ಈ ತಿಂಗಳು ಚರ್ಚಿಸಲಿದೆ.

ಪ್ರೌಢ ಶಿಕ್ಷಣವನ್ನೂ ಈ ಕಾಯ್ದೆಯ ವ್ಯಾಪ್ತಿಗೆ ತರಲು ಮಂಡಳಿಯ ಉಪಸಮಿತಿಯ ಸದಸ್ಯರು ಒಲವು ತೋರಿದ್ದಾರೆ.

ದೀರ್ಘಕಾಲದ ಈ ಬೇಡಿಕೆಯನ್ನು ಪರಿಶೀಲಿಸಿ ಮಂಡಳಿಗೆ ಸಲಹೆ ನೀಡುವುದಕ್ಕಾಗಿ ಉಪಸಮಿತಿಯನ್ನು ರಚಿಸಲಾಗಿತ್ತು.

ADVERTISEMENT

ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್‌ ಸಿಂಗ್‌ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸುವುದಕ್ಕಾಗಿ ಈ ವಾರದಲ್ಲಿ ಸಭೆ ಸೇರುವ ನಿರೀಕ್ಷೆ ಇದೆ.

15ರಿಂದ ಸಭೆ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ ಎರಡು ದಿನಗಳ ಸಭೆ ಇದೇ 15ರಂದು ಆರಂಭವಾಗಲಿದೆ.

‘ನಮ್ಮಲ್ಲಿ ಹೆಚ್ಚಿನವರು ಈ ಬೇಡಿಕೆಯ ಪರವಾಗಿದ್ದೇವೆ. ಅಂತಿಮ ನಿರ್ಧಾರಕ್ಕಾಗಿ ವರದಿಯನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಮಂಡಿಸುತ್ತೇವೆ’ ಎಂದು ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ, ಆರ್‌ಟಿಇ ಕಾಯ್ದೆಯ ಅಡಿಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ ಮಟ್ಟಗಳಲ್ಲಿ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ.

2011ರಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸಮಿತಿಯನ್ನು ಹಲವು ಬಾರಿ ಪುನರ್‌ ರಚಿಸಲಾಗಿದೆ.

23 ಸದಸ್ಯರ ಮೊದಲ ಸಮಿತಿಯನ್ನು 2011ರ ಜೂನ್‌ 7ರಂದು ರಚಿಸಲಾಗಿತ್ತು. ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಪುರಂದೇಶ್ವರಿ ಇದರ ಮುಖ್ಯಸ್ಥರಾಗಿದ್ದರು.

‘ದೇಶದ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯಗಳಿಗೆ ಸೇರಿದ ಪ್ರತಿ ಮಗುವೂ ಕನಿಷ್ಠ 10 ವರ್ಷಗಳವರೆಗೆ ಔಪಚಾರಿಕ ಶಿಕ್ಷಣ ಪಡೆಯಬೇಕು ಎಂಬ ಅಭಿಪ್ರಾಯ ಮಂಡಳಿ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಉದ್ದೇಶದಿಂದ ಸಮಿತಿ ರಚಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಪುರಂದೇಶ್ವರಿ ನೇತೃತ್ವದ ಸಮಿತಿಗೆ ವರದಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. 2015ರ ಆಗಸ್ಟ್‌ 19ರಂದು ಮಂಡಳಿ ಸಭೆಯಲ್ಲಿ ಸಮಿತಿಯನ್ನು ಪುನರ್‌ ರಚಿಸಲು ತೀರ್ಮಾನಿಸಲಾಗಿತ್ತು. 2016ರ ಏಪ್ರಿಲ್‌ 14ರಂದು ಸಮಿತಿಯನ್ನು ಮತ್ತೆ ರಚಿಸಲಾಗಿತ್ತು.

‘ಅಂತಿಮ ನಿರ್ಧಾರ ಸರ್ಕಾರದ್ದು’

‘ಉಪ ಸಮಿತಿ ಮಾಡುವ ಶಿಫಾರಸುಗಳನ್ನು ಮಂಡಳಿಯು ಕೂಲಂಕಷವಾಗಿ ಪರಿಶೀಲಿಸಲಿದೆ. ನಂತರ ತನ್ನ ಅಭಿಪ್ರಾಯವನ್ನು ಸರ್ಕಾರದ ಮುಂದೆ ಅದು ಮಂಡಿಸಲಿದೆ. ಅಂತಿಮವಾಗಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ’ ಎಂದು ಅಧಿಕೃತ ಮೂಲಗಳು ಹೇಳಿವೆ.

ಹೊಸ ಪ್ರಸ್ತಾವನೆಯ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸು ಅಂದಾಜನ್ನು ಉಪಸಮಿತಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.