ADVERTISEMENT

ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾರ್ಥನೆ ಕಡ್ಡಾಯ: ನೋಟಿಸ್

ಪಿಟಿಐ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ನವದೆಹಲಿ: ದೇಶದ ಎಲ್ಲ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಯ ಬೆಳಗಿನ ಪ್ರಾರ್ಥನೆಯಲ್ಲಿ ಭಾಗವಹಿಸಬೇಕು ಎಂಬ ಬಗ್ಗೆ ಇರುವ ನಿಯಮದ ಕುರಿತಂತೆ ಸುಪ್ರೀಂಕೋರ್ಟ್‌ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿದೆ.

ಹಿಂದೂಧರ್ಮ ಆಧರಿತ ಪ್ರಾರ್ಥನೆಯನ್ನು ಈ ಶಾಲೆಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೇಳಲೇಬೇಕಿರುವುದನ್ನು ಪ್ರಶ್ನಿಸಿ ಮಧ್ಯಪ್ರದೇಶದ ವಿನಾಯಕ್‌ ಶಾ ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ.

‘ದೇವರು ಮತ್ತು ಧಾರ್ಮಿಕ ನಂಬಿಕೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಪ್ರಾರ್ಥನೆಯು ಅವರಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಅಭಿವೃದ್ಧಿಪಡಿಸುವಲ್ಲಿ ತಡೆಯುಂಟು ಮಾಡುತ್ತಿದೆ’ ಎಂದು ಅರ್ಜಿದಾರರು ದೂರಿದ್ದಾರೆ. ’ಪ್ರಾರ್ಥನೆ ಕಡ್ಡಾಯಗೊಳಿಸಿರುವುದು ಸಂವಿಧಾನದ 28(1)ನೇ ವಿಧಿಗೆ ವಿರುದ್ಧವಾಗಿದೆ. ಈ ವಿಧಿಯ ಪ್ರಕಾರ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ವಿಧಿವಿಧಾನವನ್ನು ಕಡ್ಡಾಯಗೊಳಿಸುವಂತಿಲ್ಲ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವ ಅರ್ಜಿದಾರರು, ಪ್ರಾರ್ಥನೆಯನ್ನು ಕಡ್ಡಾಯಗೊಳಿಸದಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.

ADVERTISEMENT

ನ್ಯಾಯಮೂರ್ತಿ ಆರ್‌.ಎಫ್‌. ನಾರಿಮನ್‌ ನೇತೃತ್ವದ ಪೀಠ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.