ADVERTISEMENT

‘ಬಲವಂತದ ಮತಾಂತರ, ಐಎಸ್‌ ಉಗ್ರರಿಗೆ ಮಾರಲು ಯತ್ನ’

ಬೆಂಗಳೂರಿನಲ್ಲಿ ಓದಿದ್ದ ಕೇರಳ ಯುವತಿಯ ದೂರು

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST

ತಿರುವನಂತಪುರ: ಕೇರಳದ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ, ಆಕೆಯನ್ನು ಲೈಂಗಿಕವಾಗಿ ಶೋಷಿಸಿ, ಸಿರಿಯಾದ ಇಸ್ಲಾಮಿಕ್‌ ಸ್ಟೇಟ್‌ ಉಗ್ರರಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಪ್ರಕರಣದಲ್ಲಿ  ಎರ್ನಾಕುಲ ಗ್ರಾಮೀಣ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಎರ್ನಾಕುಲದ ಪರವೂರು ನಿವಾಸಿಗಳಾದ ಫವಾಸ್‌ ಜಮಾಲ್‌ ಮತ್ತು ಸಿಯಾದ್‌ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್‌ ರಿಯಾಜ್‌ (26) ಎಂಬಾತ ತಲೆಮರೆಸಿಕೊಂಡಿದ್ದಾನೆ.

ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ, ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿ ನಂತರ ಮದುವೆಯಾಗಿ ಸಿರಿಯಾಕ್ಕೆ ಕರೆದೊಯ್ಯಲು ರಿಯಾಜ್‌ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ADVERTISEMENT

25 ವರ್ಷ ವಯಸ್ಸಿನ ಯುವತಿಯು ಪಟ್ಟಣಂತಿಟ್ಟದವರಾಗಿದ್ದು ಗುಜರಾತ್‌ನಲ್ಲಿ ಬೆಳೆದವರು. ರಿಯಾಜ್‌ನೊಂದಿಗೆ ಆಗಿರುವ ಮದುವೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಅವರು 2017ರ ನವೆಂಬರ್‌ನಲ್ಲಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಫವಾಸ್‌ ಮತ್ತು ಸಿಯಾದ್‌ ಈ ಸಂಚಿನಲ್ಲಿ ಭಾಗಿಯಾಗಿದ್ದು, ಪರವೂರು ಸಮೀಪದ ಮಂಜಲಿಯ ಮನೆಯೊಂದರಲ್ಲಿ ಯುವತಿಯನ್ನು ಆರು ತಿಂಗಳ ಕಾಲ ಕೂಡಿ ಹಾಕಲು ರಿಯಾಜ್‌ಗೆ ನೆರವಾಗಿದ್ದಾರೆ. ಪ್ರಮುಖ ಆರೋಪಿ ಮುಹಮ್ಮದ್‌ ರಿಯಾಜ್‌ ಭಾರತದ ಹೊರಗಿದ್ದಾನೆ ಎಂದು ನಂಬಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಎರ್ನಾಕುಲ ಗ್ರಾಮೀಣ ಜಿಲ್ಲೆಯ ಪೊಲೀಸ್‌ ಮುಖ್ಯಸ್ಥ ಎ.ವಿ. ಜಾರ್ಜ್‌ ಹೇಳಿದ್ದಾರೆ.

‘ಯುವತಿಯನ್ನು ರಿಯಾಜ್‌ ಜಿದ್ದಾಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಸಿರಿಯಾಕ್ಕೆ ಕರೆದೊಯ್ಯಲು ಯೋಜನೆ ರೂಪಿಸಿದ್ದ. ವಿವಾದಾತ್ಮಕ ಧರ್ಮಬೋಧಕ ಝಾಕೀರ್‌ ನಾಯ್ಕ್‌ ಅವರ ವಿಡಿಯೊವನ್ನು ಯುವತಿಗೆ ಬಲವಂತವಾಗಿ ತೋರಿಸಲಾಗಿತ್ತು ಮತ್ತು ಆಕೆಗೆ ಹಿಂಸೆಯನ್ನೂ ನೀಡಲಾಗಿತ್ತು’ ಎಂದು ಜಾರ್ಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯುವತಿಯನ್ನು ಲೈಂಗಿಕ ದಾಸಿ ಎಂದು ರಿಯಾಜ್‌ ಪರಿಗಣಿಸಿದ್ದ. ಸಿರಿಯಾಕ್ಕೆ ಹೋಗುವ ಯೋಚನೆಯೂ ಆತನಿತ್ತು. ಕೆಲವೇ ದಿನಗಳಲ್ಲಿ ತಾವಿಬ್ಬರು ಸಿರಿಯಾಕ್ಕೆ ಹೋಗುತ್ತಿರುವುದಾಗಿ ಯುವತಿಗೆ ತಿಳಿಸಿದ್ದ. ಆಕೆಯನ್ನು ಐಎಸ್‌ ಉಗ್ರರಿಗೆ ಮಾರುವ ಯೋಜನೆಯನ್ನೂ ಹಾಕಿಕೊಂಡಿದ್ದ’ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ.

ಬೆಂಗಳೂರಿನ ಮದರಸಾದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ತಮ್ಮನ್ನು ಭಾಗವಹಿಸುವಂತೆ ಮಾಡಲಾಯಿತು. ಈ ಕೃತ್ಯದಲ್ಲಿ ರಿಯಾಜ್‌ ಕುಟುಂಬ ಭಾಗಿಯಾಗಿದೆ. ಬಲವಂತವಾಗಿ ಮತಾಂತರ ಮಾಡಿದ ನಂತರ ಅಪರಿಚಿತ ಮೂಲಗಳಿಂದ ಅವರಿಗೆ ಹಣ ಸಂದಾಯವಾಗಿದೆ ಎಂದು ಯುವತಿ ಅರ್ಜಿಯಲ್ಲಿ ದೂರಿದ್ದಾರೆ.

2016ರ ಅಕ್ಟೋಬರ್‌ನಲ್ಲಿ ಯುವತಿ ಅಹಮದಾಬಾದ್‌ಗೆ ಮರಳಿದ್ದರು. ಇದೇ ಸಂದರ್ಭದಲ್ಲಿ ರಿಯಾಜ್‌ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿದ್ದ. ಜೊತೆಗೆ, ತನ್ನ ಬಳಿ ಇದ್ದ ವಿಡಿಯೊ ಮುಂದಿಟ್ಟುಕೊಂಡು ಬೆದರಿಸುತ್ತಿದ್ದುದರಿಂದ ಆಕೆ ಅವನೊಂದಿಗೇ ಇರಬೇಕಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

2017ರ ಆಗಸ್ಟ್‌ನಲ್ಲಿ ಯುವತಿಯನ್ನು ಜಿದ್ದಾಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ ಆಕೆ, ಅಕ್ಟೋಬರ್‌ನಲ್ಲಿ ಅಹಮದಾಬಾದ್‌ಗೆ ತಲು‍ಪಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
***
ಬೆಂಗಳೂರಿನಲ್ಲಿ ಭೇಟಿ, ಮದುವೆ ನೋಂದಣಿ!

‘ಯುವತಿ 2014ರಿಂದ ಬೆಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ತಲಶ್ಶೇರಿ ನಿವಾಸಿಯಾಗಿದ್ದ ರಿಯಾಜ್‌ನನ್ನು ಆಕೆ ಇಲ್ಲಿಯೇ ಭೇಟಿಯಾಗಿದ್ದರು. ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿದ್ದನ್ನು ರಿಯಾಜ್‌ ಚಿತ್ರೀಕರಿಸಿದ್ದ. ಇದರ ವಿಡಿಯೊ ತುಣುಕುಗಳನ್ನು ಇಟ್ಟುಕೊಂಡು ಆಕೆಯನ್ನು ಬೆದರಿಸುತ್ತಿದ್ದ ಎಂದು ಆರೋಪಿಸಲಾಗಿದೆ.

‘ನಕಲಿ ದಾಖಲೆಗಳನ್ನು ಬಳಸಿಕೊಂಡು 2016ರ ಮೇ 21ರಂದು ಹೆಬ್ಬಾಳದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇವರ ವಿವಾಹ ನೋಂದಣಿಯಾಗಿತ್ತು. ಈ ಮದುವೆಗೆ ಸಾಕ್ಷಿಗಳಾಗಿದ್ದವರು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸದಸ್ಯರು’ ಎಂದು ಯುವತಿ ಪರ ವಕೀಲ ವಿ.ಸೇತುನಾಥ್‌ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.