ADVERTISEMENT

‘ದಯಾಮರಣಕ್ಕೆ ಅವಕಾಶ ನೀಡಿ’

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ವೃದ್ಧ ದಂಪತಿ ಪತ್ರ

ಪಿಟಿಐ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST
ನಾರಾಯಣ, ಇರಾವತಿ ಲವಾಟೆ
ನಾರಾಯಣ, ಇರಾವತಿ ಲವಾಟೆ   

ಮುಂಬೈ (ಪಿಟಿಐ): ಮದುವೆಯಾದ ಆರಂಭದ ದಿನಗಳಲ್ಲಿ ಮಕ್ಕಳು ಬೇಡವೆಂದು ನಿರ್ಧರಿಸಿ,  ಈಗ ಇಳಿ ವಯಸ್ಸಿನಲ್ಲಿ ಮಕ್ಕಳೇ ಇಲ್ಲದ್ದರಿಂದ ತಮ್ಮ ಬದುಕಿ‌ಗೆ ಅರ್ಥವೇ ಇಲ್ಲ ಎಂದು ನೊಂದಿರುವ ವೃದ್ಧ ದಂಪತಿ ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.

‘ನಮಗೆ ಮಕ್ಕಳಿಲ್ಲ, ಬಂಧು ಬಳಗವಿಲ್ಲ, ಸಮಾಜಕ್ಕೆ ಮತ್ತು ವೈಯಕ್ತಿಕವಾಗಿ ನಾವು ಯಾವುದೇ ರೀತಿಯಲ್ಲಿಯೂ ಪ್ರಯೋಜನವಿಲ್ಲ. ಈ ಭೂಮಿ ಮೇಲೆ ಬದುಕಿ ಪ್ರಯೋಜನವಿಲ್ಲ. ನಾವು ಕಾಯಿಲೆ ಬಿದ್ದರೆ ನಮ್ಮ ಜವಾಬ್ದಾರಿಯನ್ನು ಯಾರ ಹೆಗಲ ಮೇಲೂ ಹಾಕಲು ಇಷ್ಟವಿಲ್ಲ. ಆದ್ದರಿಂದ ನಮಗೆ ದಯಾಮರಣಕ್ಕೆ ಅನುಮತಿ ನೀಡಿ’ ಎಂದು ಮುಂಬೈನ ನಾರಾಯಣ್ ಲಾವಟೆ(86) ಮತ್ತು ಇರಾವತಿ (79) ಕಳೆದ  ಡಿಸೆಂಬರ್ 21ರಂದು ರಾಮನಾಥ ಕೋವಿಂದ್‌ಗೆ ಮನವಿ ಸಲ್ಲಿಸಿದ್ದಾರೆ.

ದಕ್ಷಿಣ ಮುಂಬೈಯ ಚರ್ನಿ ರಸ್ತೆಯಲ್ಲಿ ವಾಸವಿರುವ ಈ ದಂಪತಿ, ತಮಗೆ ಗಂಭೀರ ಸ್ವರೂಪದ ಯಾವುದೇ ಕಾಯಿಲೆಗಳು ಇಲ್ಲದ್ದರಿಂದ ಕಾಯಿಲೆ ಬರುವವರೆಗೆ ಕಾಯುವ ಬದಲು ದಯಾಮರಣವೊಂದೇ ಉಳಿದಿರುವ ದಾರಿ ಎಂದಿದ್ದಾರೆ.

ADVERTISEMENT

ನಾರಾಯಣ್‌ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿವೃತ್ತಿಯಾಗಿದ್ದು, ಇರಾವತಿ ಶಾಲಾ ನಿವೃತ್ತ ಪ್ರಾಂಶುಪಾಲೆ.

ಈ ವಿಷಯದ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಅವರು, ’ಟೆರೇಸ್ ಮೇಲಿಂದ ಜಿಗಿದು ಅಥವಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ ನಾವು ಸಾಯುತ್ತೇವೆ ಎಂಬ ಖಾತ್ರಿಯಿಲ್ಲ’ ಎಂದರು. ‘ನಮ್ಮಂಥವರು ಜೀವನ ಕೊನೆಗಾಣಿಸಿಕೊಳ್ಳಲು ನೆರವಾಗುವ ಸಂಘಟನೆ ಸ್ವಿಟ್ಜರ್ಲೆಂಡ್‌ನಲ್ಲಿ ಇದೆ. ಅನುಭವಿ ವೈದ್ಯರು ಈ  ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ಆ ಸಂಘಟನೆಯ ಸದಸ್ಯರಾಗಿ ನಾವು ನೋಂದಾಯಿತರಾಗಿದ್ದೇವೆ. ಆದರೆ ನಮ್ಮಲ್ಲಿ ಪಾಸ್‌ಪೋರ್ಟ್ ಇಲ್ಲದಿರುವುದರಿಂದ ಅಲ್ಲಿಗೆ ನಾನು ಹೋಗಲು ಸಾಧ್ಯವಾಗಿಲ್ಲ’ ಎಂದಿದ್ದಾರೆ.

ತಮ್ಮ ಮರಣದ ನಂತರ ದೇಹವನ್ನು ದಾನ ಮಾಡಲು ಮತ್ತು ತಮ್ಮಲ್ಲಿರುವ ಸ್ವಲ್ಪ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲು ಅವರು ನಿರ್ಧರಿಸಿದ್ದಾರೆ. ‘ನನಗೆ ಎರಡು ಆಪರೇಷನ್‌ಗಳಾಗಿವೆ. ನನಗೆ ಒಬ್ಬಳೇ ಹೊರಹೋಗಲು ಸಾಧ್ಯವಾಗುವುದಿಲ್ಲ. ನನಗೆ ಮನೆಯಲ್ಲಿ ಒಬ್ಬಳೇ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ’ ಎಂದು ಇರಾವತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.