ADVERTISEMENT

ಸಿಖ್ ವಿರೋಧಿ ದಂಗೆ: ಸಮಿತಿ ರಚಿಸಿದ ‘ಸುಪ್ರೀಂ’

ಪಿಟಿಐ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST

ನವದೆಹಲಿ: 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣಗಳ ಮರುತನಿಖೆಗೆ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌.ಎನ್‌. ಧಿಂಗ್ರಾ ನೇತೃತ್ವದ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ಸುಪ್ರೀಂಕೋರ್ಟ್‌ ಗುರುವಾರ ರಚಿಸಿದೆ.

ಈ ಸಮಿತಿಯಲ್ಲಿ ಕರ್ತವ್ಯದಲ್ಲಿರುವ ಐಪಿಎಸ್‌ ಅಧಿಕಾರಿ ಅಭಿಷೇಕ್‌ ದುಲಾರ್‌ ಮತ್ತು ಐಜಿ ಶ್ರೇಣಿಯ ನಿವೃತ್ತ ಪೊಲೀಸ್‌ ಅಧಿಕಾರಿ ರಾಜದೀಪ್‌ ಸಿಂಗ್‌ ಇದ್ದಾರೆ. ಈ ಸಮಿತಿಯು ಒಟ್ಟು 186 ಪ್ರಕರಣಗಳ ಮರು ತನಿಖೆಯನ್ನು ನಡೆಸಲಿದೆ. ತನಿಖೆಯ ವರದಿಯನ್ನು ಎರಡು ತಿಂಗಳ ಒಳಗೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಆದೇಶಿಸಿದ್ದಾರೆ. ಇದರ ವಿಚಾರಣೆಯನ್ನು ಕೋರ್ಟ್‌ ಮಾರ್ಚ್‌ 19ರಿಂದ ನಡೆಸಲಿದೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕ 1984 ಅಕ್ಟೋಬರ್ 31ರಂದು ಹತ್ಯೆ ಮಾಡಿದ ನಂತರ ಸಿಖ್ ವಿರೋಧಿ ದಂಗೆ ಶುರುವಾಗಿತ್ತು. ಆಗ ಒಟ್ಟು 241 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 186 ಪ್ರಕರಣಗಳನ್ನು ತನಿಖೆ ನಡೆಸದೇ ಮುಗಿಸಿದ್ದರಿಂದ ಆ ಪ್ರಕರಣಗಳ ಮರು ತನಿಖೆಗೆ ಈಗ ಕೋರ್ಟ್‌ ಮುಂದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.