ADVERTISEMENT

ಗುಜರಾತ್: ಪ್ರಮಾಣ ವಚನ ಸ್ವೀಕರಿಸಲು 'ಶುಭ ಘಳಿಗೆ'ಗಾಗಿ ಕಾಯುತ್ತಿದ್ದಾರೆ ಶಾಸಕರು!

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 11:55 IST
Last Updated 12 ಜನವರಿ 2018, 11:55 IST
ಕೃಪೆ: ಟ್ವಿಟರ್ /@BJP4Gujarat
ಕೃಪೆ: ಟ್ವಿಟರ್ /@BJP4Gujarat   

ನವದೆಹಲಿ:  ಡಿಸೆಂಬರ್ 18 ರಂದು ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರದಲ್ಲಿ ಇನ್ನೂ ಕೆಲವು ಶಾಸಕರು ಇದುವರೆಗೆ ಪ್ರಮಾಣ ವಚನ ಸ್ವೀಕರಿಸಿ ಕಾರ್ಯ ಆರಂಭಿಸಿಲ್ಲ. ಸರ್ಕಾರ ರಚನೆಯಾಗಿ 3 ವಾರಗಳು ಕಳೆದರೂ ಪ್ರಮಾಣ ವಚನ ಸ್ವೀಕಾರ ಮಾಡಲು ಇಲ್ಲಿನ ಶಾಸಕರು ಶುಭ ಘಳಿಗೆಗಾಗಿ ಕಾಯುತ್ತಿದ್ದಾರೆ.

ಈ ರೀತಿ ವಿಳಂಬವಾಗಿರುವ ಬಗ್ಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಗುಜರಾತ್ ರಾಜ್ಯಪಾಲ ಒ.ಪಿ.ಕೊಹ್ಲಿ ಅವರಿಗೆ ಪತ್ರ ಬರೆದು ಸ್ಪೀಕರ್ ಅವರನ್ನು ನೇಮಕ ಮಾಡಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನೆರವೇರಿಸುವಂತೆ ಒತ್ತಾಯಿಸಿದ್ದರು.

ಶಾಸಕರು ಪ್ರಮಾಣ ವಚನ ಸ್ವೀಕರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಶಾಸಕರು ಒಂದು ತಿಂಗಳ ಅಶುಭ ಕಾಲ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ. ಜನವರಿ 20ರ ನಂತರವೇ ವಿಧಾನಸಭೆ ಕಲಾಪ ಆರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಸ್ಪೀಕರ್ ಚುನಾವಣೆ ಮತ್ತು ಶಾಸಕರ ಪ್ರಮಾಣ ವಚನ ಸ್ವೀಕಾರ  ನಡೆಯಲಿದೆ. ಇದಾದ ನಂತರ ಪೂರ್ವ ನಿಗದಿಯಂತೆ ಬಜೆಟ್ ಅಧಿವೇಶನ ಆರಂಭವಾಗಲಿದೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಇಲ್ಲಿನ ವಿಧಾನ ಸೌಧದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಕಟ್ಟಡವೊಂದರಲ್ಲಿ  ಕಲಾಪ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.