ADVERTISEMENT

ಅಸಾಂಪ್ರದಾಯಿಕ ವಿಧಾನ ಅನುಸರಿಸಿ

ಪಿಟಿಐ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಅಸಾಂಪ್ರದಾಯಿಕ ವಿಧಾನ ಅನುಸರಿಸಿ
ಅಸಾಂಪ್ರದಾಯಿಕ ವಿಧಾನ ಅನುಸರಿಸಿ   

ನವದೆಹಲಿ: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ತಗ್ಗಿಸಲು ವನ್ಯಜೀವಿ ತಜ್ಞರು ಹಾಗೂ ಸಂರಕ್ಷಕರು ಕೆಲವು ಅಸಾಂಪ್ರದಾಯಿಕ ವಿಧಾನಗಳನ್ನು ಸೂಚಿಸಿದ್ದಾರೆ.

ಮನುಷ್ಯನು ಕಾಡಿನೊಳಗೆ ಹೋಗಲು ಹಿಂಜರಿಯುವಂಥ ಹೆದರಿಕೆಯ ವಾತಾವರಣವನ್ನು ಮರುಸೃಷ್ಟಿಸಬೇಕು ಹಾಗೂ ಸತ್ತ ಪ್ರಾಣಿಗಳ ದೇಹವನ್ನು ಕಾಡಿನೊಳಗೆ ಹಾಕಬೇಕು ಎಂಬುದು ಪ್ರಮುಖವಾದ ಸಲಹೆಗಳು.

‘ಮಾನವ– ಪ್ರಾಣಿಗಳ ನಡುವಿನ ಸಂಘರ್ಷ ಇಂದು ಸಹಜವಾಗಿಬಿಟ್ಟಿದೆ. ಆದರೆ ವನ್ಯಜೀವಿಗಳ ಆವಾಸಸ್ಥಳವನ್ನು ಅತಿಕ್ರಮಣ ಮಾಡಿಕೊಳ್ಳುವ ಮನುಷ್ಯನ ಪ್ರವೃತ್ತಿಯಿಂದಾಗಿ ಸಂಘರ್ಷದ ಪ್ರಮಾಣ ಹೆಚ್ಚುತ್ತಲೇ ಇದೆ’ ಎಂದು ಸುದ್ದಿಸಂಸ್ಥೆ ಜೊತೆ ಮಾತನಾಡಿದ, ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕಿ ಬೆಲಿಂಡಾ ರೈಟ್ ‌ಹೇಳಿದ್ದಾರೆ.

ADVERTISEMENT

‘ಅರಣ್ಯ ಭೂಮಿಯ ನಾಶ ಹಾಗೂ ಚದುರುವಿಕೆಯೇ ಸಂಘರ್ಷದ ಮೂಲ ಕಾರಣ. ಭಾರತದ ವನ್ಯಜೀವಿಗಳ ಸಂರಕ್ಷಣೆ ಕುರಿತು ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಇದನ್ನು ತಡೆಯಬೇಕು’ ಎಂದು ಅವರು ಹೇಳಿದ್ದಾರೆ.

‘ಸಂರಕ್ಷಿತ ಪ್ರದೇಶವನ್ನು ಸಂಧಿಸುವ ಕಾರಿಡಾರ್‌ಗಳು ಅವುಗಳ ಮೂಲ ಸ್ಥಳದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಕಾರಿಡಾರ್ ಇರದಿದ್ದರೆ ಪುನಃಸ್ಥಾಪಿಸಬೇಕು. ಜೊತೆಗೆ, ಜಾನುವಾರು, ಆಸ್ತಿಪಾಸ್ತಿ ನಷ್ಟ ಹಾಗೂ ಪ್ರಾಣಹಾನಿಗೆ ನೀಡುವ ಪರಿಹಾರದ ತ್ವರಿತ ವಿತರಣೆಯೂ ಅಷ್ಟೇ ಮುಖ್ಯ. ಆದರೆ ಇವು ದೀರ್ಘಾವಧಿ ಪರಿಹಾರ ಅಲ್ಲ’ ಎಂದು ಅವರು ಹೇಳಿದ್ದಾರೆ.

ಜನಸಂಖ್ಯೆ ನಿಯಂತ್ರಣ ಅಗತ್ಯ: ‘ಅರಣ್ಯ ಅತಿಕ್ರಮಣದ ಕುರಿತು ಸರ್ಕಾರ ಶೀಘ್ರವೇ ಗಮನ ಹರಿಸಬೇಕು’ ಎಂದು ಥಾಯ್ಲೆಂಡ್‌ನ ಆನೆಗಳ ತಜ್ಞೆ ಆ್ಯಂಡಿ ಮೆರ್ಕ್ ಹೇಳಿದ್ದಾರೆ.

‘ಜನಸಂಖ್ಯೆ ಏರಿಕೆಯಿಂದಾಗಿ ಅರಣ್ಯ ಅತಿಕ್ರಮಣವಾಗುತ್ತಿದೆ. ಜನಸಂಖ್ಯೆ ನಿಯಂತ್ರಿಸುವ ಕೆಲಸ ಆಗಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಆನೆಗಳಿಗೆ ಆಹಾರ ಸಿಗುವಂತೆ ನೋಡಿಕೊಳ್ಳಲು ಅವುಗಳ ಸದ್ಯದ ಆವಾಸಸ್ಥಾನಗಳ ಸಮೀಕ್ಷೆ ನಡೆಸಬೇಕು ಹಾಗೂ ಅಭಿವೃದ್ಧಿಪಡಿಸಬೇಕು. ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದಾಗ ಅವುಗಳನ್ನು ಓಡಿಸಲು ಪಟಾಕಿ ಸಿಡಿಸುವುದು, ಅವು ಗುಂಪು ಸೇರುವುದನ್ನು ಬಿಟ್ಟು ಪ್ರತಿಯೊಂದೂ ಪ್ರತ್ಯೇಕವಾಗಿ ಕಾಡಿಗೆ ಮರಳುವಂತೆ ಮಾಡುವ ಉಪಾಯಗಳನ್ನು ಕಂಡುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ದಾಳಿ ಕಡಿಮೆ ಆಗುತ್ತದೆ’

‘ಸತ್ತ ಸಾಕುಪ್ರಾಣಿಗಳನ್ನು ಕಾಡಿನಲ್ಲಿ ಹಾಕಬೇಕು. ಅರಣ್ಯದಲ್ಲಿನ ಮಾಂಸಾಹಾರಿ ಪ್ರಾಣಿಗಳು ಇವುಗಳನ್ನು ತಿಂದು ಹುಲುಸಾಗಿ ಬೆಳೆಯುತ್ತವೆ. ಇದರಿಂದಾಗಿ ಮಾಂಸಾಹಾರಿ ಪ್ರಾಣಿಗಳು ಜಾನುವಾರುಗಳ ಮೇಲೆ ದಾಳಿ ಮಾಡುವುದು ಕಡಿಮೆ ಆಗುತ್ತದೆ ಹಾಗೂ ಮನುಷ್ಯರನ್ನು ಸಾಯಿಸುವ ಪ್ರಮಾಣವೂ ತಗ್ಗುತ್ತದೆ’ ಎಂಬುದು ಹಿರಿಯ ವನ್ಯಜೀವಿ ಸಂರಕ್ಷಕ ರಾಜಾ ಎಚ್. ತೆಹ್ಸೀನ್ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.