ADVERTISEMENT

‘ಹಿಂದೂ ಸಂಸ್ಕೃತಿ ಜೊತೆ ಗುರುತಿಸಿಕೊಳ್ಳುವ ಮುಸ್ಲಿಮರಿಗೆ ಮಾತ್ರ ದೇಶದಲ್ಲಿ ಸ್ಥಾನ’

ಪಿಟಿಐ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
‘ಹಿಂದೂ ಸಂಸ್ಕೃತಿ ಜೊತೆ ಗುರುತಿಸಿಕೊಳ್ಳುವ ಮುಸ್ಲಿಮರಿಗೆ ಮಾತ್ರ ದೇಶದಲ್ಲಿ ಸ್ಥಾನ’
‘ಹಿಂದೂ ಸಂಸ್ಕೃತಿ ಜೊತೆ ಗುರುತಿಸಿಕೊಳ್ಳುವ ಮುಸ್ಲಿಮರಿಗೆ ಮಾತ್ರ ದೇಶದಲ್ಲಿ ಸ್ಥಾನ’   

ಬಲಿಯಾ(ಉತ್ತರ ಪ್ರದೇಶ): ‘ಭಾರತವು ಒಮ್ಮೆ ‘ಹಿಂದೂ ರಾಷ್ಟ್ರ’ ಆದ ನಂತರ ಹಿಂದೂ ಸಂಸ್ಕೃತಿಯನ್ನು ಅಂತರ್ಗತಗೊಳಿಸಿಕೊಳ್ಳುವ ಮುಸ್ಲಿಮರು ಮಾತ್ರ ಈ ದೇಶದಲ್ಲಿ ಉಳಿಯಲು ಸಾಧ್ಯ’  ಎಂದು ಇಲ್ಲಿನ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ. ಈ ಹೇಳಿಕೆಗೆ ಆಕ್ಷೇಪಗಳು ವ್ಯಕ್ತವಾಗಿವೆ.

ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಮುಸ್ಲಿಮರಲ್ಲೂ ಕೆಲವರು ದೇಶಭಕ್ತರಿದ್ದಾರೆ’ ಎಂದಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅವತಾರ ಪುರುಷ’ ಎಂದು ಬಣ್ಣಿಸಿದ್ದಾರೆ.

‘ಆರ್‌ಎಸ್‌ಎಸ್ ಸ್ಥಾಪನೆಯಾಗಿ 2025ಕ್ಕೆ 100 ವರ್ಷ ಪೂರೈಸುತ್ತದೆ. ಅದಕ್ಕೂ ಒಂದು ವರ್ಷ ಮುನ್ನವೇ, ಅಂದರೆ 2024ರ ವೇಳೆಗೆ ಭಾರತವು ಹಿಂದೂ ರಾಷ್ಟ್ರವಾಗಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ದೇವರ ದಯೆಯಿಂದ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇದಕ್ಕಾಗಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕೃತಜ್ಞತೆಗಳು. ಭಾರತವು ವಿಶ್ವಗುರುವಾಗಿ ಗುರುತಿಸಿಕೊಳ್ಳಲಿದೆ’ ಎಂದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಟೀಕಿಸಿರುವ ಸಿಂಗ್, ‘ರಾಹುಲ್ ಅವರಲ್ಲಿ ಎರಡು ಬಗೆಯ ಸಂಸ್ಕೃತಿಗಳು ಮಿಳಿತಗೊಂಡಿವೆ. ಒಂದು ಇಟಲಿಯದ್ದು, ಇನ್ನೊಂದು ಭಾರತದ್ದು. ಅವರು ಭಾರತೀಯ ಚಿಂತನೆಗಳ ಮಾರ್ಗದರ್ಶಕನಾಗುವುದು ಸಾಧ್ಯವಿಲ್ಲ’ ಎಂದು ಮೂದಲಿಸಿದ್ದಾರೆ.

‘ಪ್ರಧಾನಿಯಾಗುವ ಕನಸಿನಲ್ಲಿ ಗಾಂಧಿ ವಂಶದ ಕುಡಿ (ರಾಹುಲ್ ಗಾಂಧಿ) ಯಾವ ಘೋಷಣೆಯನ್ನಾದರೂ ಹುಟ್ಟುಹಾಕಬಹುದು. ಆದರೆ ದೇಶವನ್ನು ಪ್ರಬಲಗೊಳಿಸುವ ಶಕ್ತಿ ಹಾಗೂ ಮೌಲ್ಯಗಳು ಅವರಲ್ಲಿಲ್ಲ’ ಎಂದು ಜರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.