ADVERTISEMENT

‘ಖಾಸಗಿ ಮಾಹಿತಿ ನೀಡಲು ಜನರ ಮೇಲೆ ಒತ್ತಡ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST

ನವದೆಹಲಿ: ವೈಯಕ್ತಿಕ ವಿವರಗಳನ್ನು ಖಾಸಗಿ ನಿರ್ವಾಹಕರಿಗೆ ನೀಡುವಂತೆ ಜನರ ಮೇಲೆ ಒತ್ತಡ ಹೇರಲಾಗಿದೆ. ಹೀಗೆ ನೀಡಲಾದ ಮಾಹಿತಿಗೆ ಯಾವುದೇ ಸುರಕ್ಷತೆ ಇಲ್ಲ. ಜನರ ಖಾಸಗಿತನದ ಹಕ್ಕನ್ನು ರಕ್ಷಿಸಲು ಸರ್ಕಾರ ವಿಫಲವಾಗಿದೆ ಎಂದು ಆಧಾರ್‌ ಯೋಜನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಹೆಚ್ಚು ಹೆಚ್ಚು ಡಿಜಿಟಲೀಕರಣಗೊಳ್ಳುತ್ತಿರುವ ಈ ದಿನಗಳಲ್ಲಿ ಸರ್ಕಾರವು ಜನರ ಮಿತ್ರನಂತೆ ವರ್ತಿಸಬೇಕೇ ಹೊರತು ಪ್ರತಿಸ್ಪರ್ಧಿಯಂತೆ ನಡೆದುಕೊಳ್ಳಬಾರದು. ದೇಶೀಯ ಮತ್ತು ಸಾಗರೋತ್ತರ ಉದ್ಯಮಗಳಿಂದ ಜನರ ಖಾಸಗಿತನದ ಹಿತಾಸಕ್ತಿಗಳನ್ನು ಸರ್ಕಾರ ರಕ್ಷಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಶ್ಯಾಮ್‌ ದಿವಾವ್‌ ವಾದಿಸಿದರು.

ಖಾಸಗಿ ಕಂಪನಿಗಳಿಂದ ವಿಮೆ ಮತ್ತು ಮೊಬೈಲ್‌ ಸಂಪರ್ಕ ಪಡೆದುಕೊಳ್ಳುವ ಜನರು ತಮ್ಮೆಲ್ಲ ವೈಯಕ್ತಿಕ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂಬುದರತ್ತ ಪೀಠವು ವಕೀಲರ ಗಮನ ಸೆಳೆಯಿತು. ‘ಸರ್ಕಾರವು ಆಯ್ಕೆಗಳನ್ನು ದ್ವಿಗುಣಗೊಳಿಸಿದೆ... ವಿಳಾಸ ದೃಢೀಕರಣ ಮತ್ತು ಇತರ ವಿವರಗಳನ್ನು ಸರ್ಕಾರವು ಕೇಳಿದ ಕೂಡಲೇ ನಿಮಗೆ ಸಮಸ್ಯೆ ಎದುರಾಗುತ್ತದೆ. ನೀಡಲು ನೀವು ಹಿಂಜರಿಯುತ್ತೀರಿ’ ಎಂದು ಪೀಠವು ಹೇಳಿತು.

ADVERTISEMENT

ಜನಗಣತಿಗಾಗಿ ಮಾಹಿತಿ ಸಂಗ್ರಹಿಸುವಾಗ ಎಲ್ಲ ವಿವರಗಳನ್ನು ಗೋಪ್ಯವಾಗಿ ಇರಿಸಬೇಕು ಎಂಬ ಕಾನೂನು ಇದೆ. ಆದರೆ ಆಧಾರ್‌ ವಿಚಾರದಲ್ಲಿ ಇಂತಹ ಸುರಕ್ಷತೆಯೇ ಇಲ್ಲ. ಹೀಗೆ ಸಂಗ್ರಹಿಸಲಾದ ಮಾಹಿತಿಯು ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ನಿಯಂತ್ರಣದಲ್ಲಿ ಇಲ್ಲವೇ ಇಲ್ಲ. ಖಾಸಗಿ ಸಂಸ್ಥೆಗಳು ಈ ವಿವರಗಳನ್ನು ಸ್ವಂತ ವ್ಯಾಪಾರಿ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು ಎಂದು ದಿವಾನ್‌ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.