ADVERTISEMENT

ಪುದುಚೇರಿಗೆ ಕಾವೇರಿ ನೀರು ಬಿಡದ ತಮಿಳುನಾಡು

ಪಿಟಿಐ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ವಿ.ನಾರಾಯಣ ಸ್ವಾಮಿ
ವಿ.ನಾರಾಯಣ ಸ್ವಾಮಿ   

ಪುದುಚೇರಿ: ಕರ್ನಾಟಕ ಹರಿಸುವ ಕಾವೇರಿ ನೀರಿನಲ್ಲಿ ತಮಿಳುನಾಡು 6 ಟಿಎಂಸಿ ಅಡಿ ನೀರನ್ನು ಪುದುಚೇರಿಗೆ ಬಿಡುತ್ತಿಲ್ಲ ಎಂದು ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಭಾನುವಾರ ಆರೋಪಿಸಿದ್ದಾರೆ.

ತಮಿಳುನಾಡು ಸರ್ಕಾರ ವೀಡೂರ್‌ ಅಣೆಕಟ್ಟೆಯಿಂದ ಕೃಷಿ ಬಳಕೆಗೂ ಪುದುಚೇರಿಗೆ ನೀರು ಬಿಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1961ರ ಅಂತರರಾಜ್ಯ ಒಪ್ಪಂದದ ಪ್ರಕಾರ, ವಿಲ್ಲೂಪುರಂ ಜಿಲ್ಲೆಯಲ್ಲಿರುವ ವೀಡೂರ್‌ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನಲ್ಲಿ ಪುದುಚೇರಿಗೂ ಪಾಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ವರ್ಷ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಹಿಂದೆ ನಡೆದ ಒಪ್ಪಂದದಂತೆ ತಮಿಳುನಾಡು ಸರ್ಕಾರ ನೀರು ಹರಿಸಬೇಕು’ ಎಂದು ಮನವಿ ಮಾಡಿ ತಮಿಳುನಾಡಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.

ಕಾಯ್ದೆ ಪ್ರಕಾರ ನೇಮಕ: ಸಿ.ಎಂ
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾಗಿ ಲಾಭದಾಯಕ ಹುದ್ದೆ ಹೊಂದಿರುವ ಕಾಂಗ್ರೆಸ್‌ ಮತ್ತು ಡಿಎಂಕೆ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕು ಎಂಬ ಎಐಎಡಿಎಂಕೆ ಬೇಡಿಕೆಗೆ ಪ್ರತಿಕ್ರಿಯಿಸಿದ ನಾರಾಯಣ ಸ್ವಾಮಿ, ‘ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯಲ್ಲಿ ಈ ಹಿಂದೆ ಅಂಗೀಕಾರಿಸಲಾದ ಕಾಯ್ದೆಯ ಅನುಸಾರ ನೇಮಕ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಲಾಭದಾಯಕ ಹುದ್ದೆ ಹೊಂದಿರುವ ಆಡಳಿತಾರೂಢ ಪಕ್ಷಗಳ ಶಾಸಕರ ಅನರ್ಹತೆಗೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಎಐಡಿಎಂಕೆ ಶನಿವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.