ADVERTISEMENT

ಟೀಮ್‌ ಇಂಡಸ್‌– ಇಸ್ರೊ ಒಪ್ಪಂದ ಅಂತ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಾಹ್ಯಾಕಾಶ ನೌಕೆ ಅಭಿವೃದ್ಧಿಪಡಿಸಿ ಚಂದ್ರನಲ್ಲಿ ಅನ್ವೇಷಣೆ ನಡೆಸುವ ‘ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಜ್‌’ ಸ್ಪರ್ಧೆಯಿಂದ ಬೆಂಗಳೂರಿನ ‘ಟೀಮ್‌ ಇಂಡಸ್‌’ ಹಿಂದಕ್ಕೆ ಸರಿದಿದೆ.

ಲ್ಯಾಂಡರ್‌ ಮತ್ತು ರೋವರ್‌ ಒಳಗೊಂಡ ಪೇಲೋಡ್‌ ಕಳುಹಿಸುವ ಸಂಬಂಧ ಟೀಮ್‌ ಇಂಡಸ್‌ ಮತ್ತು ಇಸ್ರೊ ಮಾಡಿಕೊಂಡಿದ್ದ ಉಡಾವಣಾ ಒಪ್ಪಂದವನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ರದ್ದುಪಡಿಸಿವೆ.

‘ಉಡ್ಡಯನಕ್ಕೆ ಸಂಬಂಧಿಸಿದಂತೆ 2016 ರಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸುತ್ತಿದ್ದೇವೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಖಾಸಗಿಯವರ ಪಾಲ್ಗೊಳ್ಳುವಿಕೆಯನ್ನು ಅಂತರಿಕ್ಷ್‌ ನಿರಂತರವಾಗಿ ಪ್ರೋತ್ಸಾಹ ನೀಡಲಿದೆ. ಭವಿಷ್ಯದಲ್ಲಿ ಟೀಮ್‌ ಇಂಡಸ್‌ನ ಯಾವುದೇ ಯೋಜನೆಗೆ ನೆರವು ಮತ್ತು ಸಹಭಾಗಿತ್ವ ನೀಡಲಿದೆ’ ಎಂದು ಇಸ್ರೊದ ವಾಣಿಜ್ಯ ಅಂಗ ಸಂಸ್ಥೆ ಅಂತರಿಕ್ಷ್‌ ಕಾರ್ಪೊರೇಷನ್‌ ಅಧ್ಯಕ್ಷ ರಾಕೇಶ್‌ ಶಶಿಭೂಷಣ್‌ ತಿಳಿಸಿದ್ದಾರೆ.

ADVERTISEMENT

ಸ್ಪರ್ಧೆಯೇ ರದ್ದು: ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಜ್‌ ₹ 3 ಕೋಟಿ ಬಹುಮಾನದ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಗೆ ಭಾರತದ ಟೀಮ್‌ ಇಂಡಸ್‌ ಸೇರಿ ವಿಶ್ವದ ಐದು ತಂಡಗಳು ಆಯ್ಕೆಯಾಗಿದ್ದವು. ಆದರೆ, ಈ ಖಾಸಗಿ ತಂಡಗಳು ತಮ್ಮ ಯೋಜನೆಗೆ ಹಣವನ್ನು ಸಂಗ್ರಹಿಸುವಲ್ಲಿ ವಿಫಲವಾಗಿದ್ದರಿಂದ ಸ್ಪರ್ಧೆಯನ್ನೇ ರದ್ದುಪಡಿಸಲಾಗಿದೆ ಎಂದು ಸ್ಪರ್ಧೆಯ ಆಯೋಜಕರು ಪ್ರಕಟಿಸಿದ್ದಾರೆ.

ಇದೇ ಮಾರ್ಚ್‌  31 ರೊಳಗೆ ಯಾವುದೇ ತಂಡ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಐದೂ ತಂಡಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದ ಬಳಿಕ ಸ್ಪರ್ಧೆಯನ್ನು ರದ್ದು ಪಡಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಎಕ್ಸ್‌ಪ್ರೈಜ್‌ನ ಅಧ್ಯಕ್ಷ ಪೀಟರ್‌ ಎಚ್‌. ಡಯಮಂಡೀಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.