ADVERTISEMENT

ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ: 2017ರಲ್ಲಿ ಪೋಲೆಂಡ್‌ನಲ್ಲಿ ಹೆಚ್ಚು ಪ್ರಕರಣ

ಏಜೆನ್ಸೀಸ್
Published 25 ಜನವರಿ 2018, 10:20 IST
Last Updated 25 ಜನವರಿ 2018, 10:20 IST
ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ: 2017ರಲ್ಲಿ ಪೋಲೆಂಡ್‌ನಲ್ಲಿ ಹೆಚ್ಚು ಪ್ರಕರಣ
ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ: 2017ರಲ್ಲಿ ಪೋಲೆಂಡ್‌ನಲ್ಲಿ ಹೆಚ್ಚು ಪ್ರಕರಣ   

ನವದೆಹಲಿ: 2017ರಲ್ಲಿ ವಿಶ್ವದಾದ್ಯಂತ ನಡೆದ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಹೆಚ್ಚಿನವು ಪೋಲೆಂಡ್‌ನಲ್ಲಿ ನಡೆದಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಸರ್ಕಾರದ ಅಂಕಿ ಅಂಶದ ಪ್ರಕಾರ 2017ರಲ್ಲಿ ಭಾರತದ ಒಟ್ಟು 5.8 ಲಕ್ಷ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿದ್ದಾರೆ.

ವಿಶ್ವದಾದ್ಯಂತ ದಾಖಲಾಗಿರುವ ಒಟ್ಟು 21ರಲ್ಲಿ 9 ಪ್ರಕರಣಗಳು ಪೋಲೆಂಡ್‌ನಲ್ಲಿ ದಾಖಲಾಗಿವೆ ಎನ್ನಲಾಗಿದೆ. ಇಟಲಿಯಲ್ಲಿ 3 ಪ್ರಕರಣಗಳು ನಡೆದಿವೆ. ಉಳಿದಂತೆ ಆಸ್ಟ್ರೇಲಿಯಾದಲ್ಲಿ 2, ರಷ್ಯಾ, ಬಾಂಗ್ಲಾದೇಶ, ಬಲ್ಗೇರಿಯಾ, ಅಮೆರಿಕ, ಗಯಾನ, ಜೆಕ್‌ ಗಣರಾಜ್ಯದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ADVERTISEMENT

2016ರಲ್ಲಿ ಉಕ್ರೇನ್‌ನಲ್ಲಿ ನಡೆದ ದಾಳಿ ವೇಳೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು.

‘ಸುಮಾರು 2,500 ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್‌ನಲ್ಲಿ ಓದುತ್ತಿದ್ದಾರೆ. ಈ ಪ್ರಕರಣಗಳನ್ನು ಜನಾಂಗೀಯ ಪ್ರೇರಿತ ದಾಳಿಗಳು ಎಂದು ಹೇಳಲಾಗದು’ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.

2017ರ ಮಾರ್ಚ್‌ನಲ್ಲಿ ವ್ಯಕ್ತಿಯೊಬ್ಬರು ಪೋನ್‌ಜಾಮ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ತೀವ್ರವಾಗಿ ಹಲ್ಲೆಗೊಳಗಾದುದರ ವಿರುದ್ಧ ಟ್ವಿಟರ್‌ನಲ್ಲಿ ದೂರಿದ್ದರು. ಇದಾದ ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪೋಲೆಂಡ್‌ನಲ್ಲಿನ ಭಾರತೀಯ ರಾಯಭಾರ ಅಧಿಕಾರಿಗಳನ್ನು ವರದಿ ಕೇಳಿದ್ದರು.

ಚಿಕಿತ್ಸೆ ಬಳಿಕ ಮಾತನಾಡಿದ್ದ ಹಲ್ಲೆಗೊಳಗಾದ ವಿದ್ಯಾರ್ಥಿ ‘ತನ್ನ ಮೇಲಿನ ಹಲ್ಲೆ ಜನಾಂಗೀಯ ಪ್ರೇರಿತ’ ಎಂದಿದ್ದರು. ಆದರೆ ಅದನ್ನು ಸರ್ಕಾರ ದೃಢಪಡಿಸಿರಲಿಲ್ಲ.

ದಾಳಿ ಯಾವ ಮಾದರಿಯದು ಎಂಬುದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯ ಯಾವುದೇ ಹೇಳಿಕೆ ಅಥವಾ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ವಿದೇಶಗಳಲ್ಲಿರುವ ಭಾರತದ ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್‌, ಹಡಗು ನಿರ್ಮಾಣ, ವೈದ್ಯಕೀಯ, ನಗರ ಯೋಜನೆ ಹಾಗೂ ಗಣಿ ವಿಷಯಗಳ ಕುರಿತು ವ್ಯಾಸಂಗ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.