ADVERTISEMENT

ಬೆದರಿಕೆಗೆ ಬಗ್ಗುವುದಿಲ್ಲ: ಜಮೀದಾ ಸ್ಪಷ್ಟ ನುಡಿ

ಶುಕ್ರವಾರದ ನಮಾಜ್‌ ನೇತೃತ್ವ ವಹಿಸಿದ್ದ ಮಹಿಳೆ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಜಮೀದಾ
ಜಮೀದಾ   

ತಿರುವನಂತಪುರ/ ಮಲಪ್ಪುರ: ಕೇರಳದ ಮಲಪ್ಪುರ ಗ್ರಾಮದಲ್ಲಿ ಎರಡು ದಿನಗಳ ಹಿಂದಷ್ಟೇ ಶುಕ್ರವಾರದ ನಮಾಜ್‌ನ ನೇತೃತ್ವ ವಹಿಸಿ ಇತಿಹಾಸ ಬರೆದಿದ್ದ ಕೆ. ಜಮೀದಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎದುರಾದ ನಿಂದನೆಗಳನ್ನು ದಿಟ್ಟತನದಿಂದ ಪ್ರತಿಭಟಿಸಿದ್ದಾರೆ.

‘ನಾನು ಹೆದರಿಲ್ಲ. ಮನೆಯಲ್ಲಿ ಕೂತು ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿಲ್ಲ. ನಾನು ಏನು ಹೇಳಿದ್ದೇನೋ ಅದನ್ನು ಬಹಿರಂಗವಾಗಿ ಮಾಡಿ
ದ್ದೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೇಡಿಗಳು ಒಡ್ಡಿರುವ ಬೆದರಿಕೆಗಳಿಂದ ನನ್ನನ್ನು ಸುಮ್ಮನಾಗಿಸಲಾಗದು’ ಎಂದು 34 ವರ್ಷದ ಜಮೀದಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಮೀದಾ ನೇತೃತ್ವದಲ್ಲಿ ಕಳೆದ ಶುಕ್ರವಾರ 50 ಮಂದಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಮೂಲಕ ಮುಸ್ಲಿಂ ಮಹಿಳೆ ನೇತೃತ್ವದಲ್ಲಿ ನಡೆದ ಮೊದಲ ಪ್ರಾರ್ಥನೆ ಇದು ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಮುಸ್ಲಿಂ ಮಹಿಳೆಯರು ಪ್ರಾರ್ಥನೆಯ ನೇತೃತ್ವ ವಹಿಸಬಾರದು ಎಂಬ ಶತಮಾನಗಳಷ್ಟು ಹಳೆಯ ಕಟ್ಟುಪಾಡನ್ನು ಜಮೀದಾ ಮುರಿದಿದ್ದರು.

ADVERTISEMENT

ಧರ್ಮ ಗುರುಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳಿಗೆ ಉತ್ತರಿಸಿರುವ ಜಮೀದಾ, ‘ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ನನಗೆ ತಿಳಿದಿತ್ತು. ಅದಕ್ಕೆ ನಾನು ಸಿದ್ಧಳಾಗಿದ್ದೆ. ಈ ಹಿಂದೆ ಇಸ್ಲಾಂನಲ್ಲಿ ಸುಧಾರಣೆ ತರಲು ನಡೆದ ಯತ್ನಗಳಿಗೆ ಇಂಥದೇ ಪ್ರತಿಕ್ರಿಯೆ ಸಿಕ್ಕಿದೆ. ನನ್ನನ್ನು ಬೆಂಬಲಿಸಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ’ ಎಂದು ಜಮೀದಾ ಹೇಳಿದ್ದಾರೆ.

ಇಸ್ಲಾಂನಲ್ಲಿ ಸುಧಾರಣೆ ತರುವ ಅಭಿಯಾನವನ್ನು ಕುರಾನ್ ಸುನ್ನತ್ ಸೊಸೈಟಿ ಮುನ್ನಡೆಸುತ್ತಿದೆ. ತ್ರಿವಳಿ ತಲಾಕ್ ಪದ್ಧತಿಯನ್ನು ಜಮೀನಾ ವಿರೋಧಿಸುತ್ತಾ ಬಂದಿದ್ದರು.
**
ಜಮೀದಾ ಹೇಳುವುದೇನು?

ಕುರಾನ್ ಬಗೆಗಿನ ಕೆಲವು ವ್ಯಾಖ್ಯಾನಗಳು ಧರ್ಮದಲ್ಲಿ ತಾರತಮ್ಯ ಉಂಟು ಮಾಡುತ್ತಿವೆ ಎಂದು ಜಮೀದಾ ಹೇಳಿದ್ದಾರೆ. ಮಹಿಳೆಯೊಬ್ಬರು ಪ್ರಾರ್ಥನೆಯ ನೇತೃತ್ವ ವಹಿಸಬಾರದು ಎಂದು ಕುರಾನ್ ಹೇಳುವುದಿಲ್ಲ. ಆದರೆ ವ್ಯಾಖ್ಯಾನಗಳನ್ನು ಮಂಡಿಸುವಾಗ ಆಧಾರಗಳು ಇರಬೇಕು ಎಂದು ಅವರು ವಾದಿಸುತ್ತಾರೆ. ಧರ್ಮವು ತಾರತಮ್ಯ ಮಾಡುವುದಿಲ್ಲ. ಆದರೆ ಪ್ರಭುತ್ವವನ್ನು ಸಾಧಿಸಲು ಯತ್ನಿಸುವ ಕೆಲವರು ಇಂತಹ ವ್ಯಾಖ್ಯಾನಗಳನ್ನು ಮುಂದಿಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

‘ಕುರಾನ್ ರೀತಿ ನಾನು ನಡೆದುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ತಮ್ಮನ್ನು ಟೀಕಿಸಿದ ಒಬ್ಬರಿಗೆ ನಾನು ಸವಾಲು ಹಾಕಿದೆ. ಆದರೆ ಅವರು ತಮ್ಮ ವಾದವನ್ನೇ ಬದಲಾಯಿಸಿಕೊಂಡರು’ ಎಂದು ಜಮೀದಾ ಹೇಳಿದ್ದಾರೆ.
**
ಮಹಿಳೆಯರು ಪ್ರಾರ್ಥನೆಯ ನೇತೃತ್ವ ವಹಿಸಬಾರದು ಎಂದು ಕುರಾನ್‌ನಲ್ಲಿ ಹೇಳಿದ್ದರೆ, ಪುರಾವೆಗಳ ಸಹಿತ ಚರ್ಚೆಗೆ ಬನ್ನಿ. ಮಾತುಕತೆಗೆ ನಾನು ಸಿದ್ಧ.
   -ಜಮೀದಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.