ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಬಳಿ ₹60 ಕೋಟಿ ಮೌಲ್ಯದ ಆಸ್ತಿ ಪತ್ತೆ

ಏಜೆನ್ಸೀಸ್
Published 30 ಜನವರಿ 2018, 11:11 IST
Last Updated 30 ಜನವರಿ 2018, 11:11 IST
ಪಸುಪರ್ತಿ ಪ್ರದೀಪ್ ಕುಮಾರ್‌
ಪಸುಪರ್ತಿ ಪ್ರದೀಪ್ ಕುಮಾರ್‌   

ಆಂಧ್ರಪ್ರದೇಶ: ವಿಶಾಖಪಟ್ಟಣದ ನಗರಾಭಿವೃದ್ಧಿ ಪ್ರಾಧಿಕಾರದ(ವಿಯುಡಿಎ) ಹಿರಿಯ ಅಧಿಕಾರಿ ಪಸುಪರ್ತಿ ಪ್ರದೀಪ್ ಕುಮಾರ್‌ ಅವರ ಮನೆ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ₹60 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.

ಈ ದಾಳಿ ಸೋಮವಾರ ರಾತ್ರಿ ನಡೆದಿದ್ದು, ಜಮೀನು, ನಗದು, ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. 

ಪ್ರದೀಪ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 12 ಕಡೆ ದಾಳಿ ನಡೆಸಿದ್ದಾರೆ.

ADVERTISEMENT

1984ರಲ್ಲಿ ಕಟ್ಟಡ ಮೇಲ್ವಿಚಾರಕರಾಗಿ ಕೆಲಸಕ್ಕೆ ಸೇರಿದ್ದರು. ಆಗ ಅವರು ₹1,300 ವೇತನ ಪಡೆಯುತ್ತಿದ್ದರು.

ಸದ್ಯ ‍ಪ್ರದೀಪ್‌ ಅವರು ವಿಶಾಖಪಟ್ಟಣದ ನಗರಾಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ₹ 1 ಲಕ್ಷ ವೇತನ ಪಡೆಯುತ್ತಿದ್ದಾರೆ.

ದಾಳಿ ವೇಳೆ ಐದು ಪ್ಲ್ಯಾಟ್‌ಗಳು ಹಾಗೂ ಕೃಷ್ಣ, ಕಡಪ, ಅನಂತಪುರ ಜಿಲ್ಲೆಗಳಲ್ಲಿ ಕೃಷಿ ಜಮೀನುನನ್ನು ಹೊಂದಿರುವುದು ತಿಳಿದು ಬಂದಿದ್ದು, ಜಮೀನು ಪ್ರದೀಪ್‌ ಅವರ ತಂದೆ, ಹೆಂಡತಿ ಹಾಗೂ ಮಗನ ಹೆಸರಿನಲ್ಲಿ ನೊಂದಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2.7 ಕೆ.ಜಿ ಬಂಗಾರ, 12.5 ಕೆ.ಜಿ ಬೆಳ್ಳಿ, 2 ಪ್ಲಾಟಿನಮ್‌ ಉಂಗುರಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನ ಪತ್ತೆಯಾಗಿದೆ. ಜತೆಗೆ, ಮನೆ ಸದಸ್ಯ ಹೆಸರಿನಲ್ಲಿ ₹35 ಲಕ್ಷ ಬ್ಯಾಂಕ್‌ ಠೇವಣಿ ಇಟ್ಟಿದ್ದಾರೆ. 

ಪ್ರದೀಪ್‌ ಅವರು ಮನೆಯಲ್ಲಿ ಬಳಸುವ ಪಾತ್ರೆ, ಕುಡಿಯುವ ನೀರಿನ ಗ್ಲಾಸ್‌, ಕೀಗಳು ಎಲ್ಲವನ್ನು ಬೆಳ್ಳಿಯಿಂದಲ್ಲೇ ಮಾಡಿಸಿದ್ದು, ಜತೆಗೆ ಹೆಂಡತಿಗೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.