ADVERTISEMENT

ಹೋಳಿಗೆಯಲ್ಲಿ ಹೂರಣವೇ ಇಲ್ಲದ ತೆಳುವಾದ ಬಜೆಟ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 16:40 IST
Last Updated 2 ಜುಲೈ 2019, 16:40 IST
ಹೋಳಿಗೆಯಲ್ಲಿ ಹೂರಣವೇ ಇಲ್ಲದ ತೆಳುವಾದ ಬಜೆಟ್‌
ಹೋಳಿಗೆಯಲ್ಲಿ ಹೂರಣವೇ ಇಲ್ಲದ ತೆಳುವಾದ ಬಜೆಟ್‌   

ಪುಷ್ಟಿಕರವಲ್ಲದ ತೆಳುವಾದ ಬಜೆಟ್ ಅನ್ನು ಸರ್ಕಾರ ಪರಿಣಾಮಕಾರಿಯಾಗಿ ಬಿಂಬಿಸಿದೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಹಾಗೂ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಲೋಪಗಳನ್ನು ಲಕ್ಷ್ಯದಲ್ಲಿ ಇಟ್ಟುಕೊಂಡೇ ಹಣಕಾಸು ಕ್ಷೇತ್ರದ ಮುನ್ಸೂಚನೆಯನ್ನು ನೀಡಿದೆ. ಜಿಎಸ್‌ಟಿಯಿಂದ ಸಂಗ್ರಹವಾಗುತ್ತಿರುವ ಹಣದ ಪ್ರಮಾಣ ಕಡಿಮೆಯಾಗಿರುವುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಈ ನಿಲುವು ತೆಗೆದುಕೊಂಡಿದೆ.

ಹಿರಿಯ ನಾಗರಿಕರಿಗೆ ಬಡ್ಡಿದರದ ಮೇಲಿನ ತೆರಿಗೆ ಮಿತಿಯನ್ನು ₹50,000ಕ್ಕೆ ಹೆಚ್ಚಿಸಿರುವುದು ಸಿಹಿ ಸುದ್ದಿ. ವೇತನದಾರ ನೌಕರರ ವೈದ್ಯಕೀಯ ಹಾಗೂ ಪ್ರವಾಸ ಭತ್ಯೆಯಲ್ಲಿ ಪ್ರಮಾಣಬದ್ಧವಾಗಿ ಹಣ ಮುರಿದುಕೊಳ್ಳಲು ಇರುವ ಮಿತಿಕೂಡ ₹40,000ಕ್ಕೆ ಏರಿಸಲಾಗಿದೆ ಇದರಿಂದ ಭತ್ಯೆಗೆ ಸಂಬಂಧಿಸಿದ ಪ್ರಕ್ರಿಯೆ ಸರಳವಾಗುವುದಲ್ಲದೆ, ವೇತನದಾರರಿಗೆಗರಿಷ್ಠ ₹12,000 ಲಾಭ ದೊರೆಯಲಿದೆ. ವೇತನದಾರರಿಗೆ ತೆರಿಗೆ ವಿಧಿಸಬಹುದಾದ ಮೊತ್ತದಲ್ಲಿ ಯಾವ ರಿಯಾಯ್ತಿಯೂ ನೀಡದಿರುವುದು ಖಂಡಿತವಾಗಿಯೂ ಕಹಿ ಸುದ್ದಿ.

ಜಿಎಸ್‌ಟಿಯಿಂದಾಗಿ ಆಗುವ ವರಮಾನ ಕೊರತೆಯು ಹಲವು ಸವಾಲುಗಳನ್ನು ಒಡ್ಡಬಲ್ಲದು. ಸರ್ಕಾರ ಇದುವರೆಗೆ ಅಚ್ಚುಕಟ್ಟಾಗಿ ಆಡಳಿತ ನಿರ್ವಹಿಸಿದೆ ಎನ್ನುವುದು ಒಪ್ಪತಕ್ಕ ವಿಷಯ. ಹಾಗಂತ ಹಣಕಾಸಿನ ವಿಷಯದಲ್ಲಿ ಅದು ವಿವೇಕಯುತವಾಗಿ ವರ್ತಿಸಿದೆ ಎಂದು ಹೇಳಲು ಬರಲಾರದು.

ADVERTISEMENT

ಉದ್ಯೋಗಾವಕಾಶ ಹಾಗೂ ಕೌಶಲಾಭಿವೃದ್ಧಿಗೆ ಅವಕಾಶ ನೀಡಲಾಗಿದೆಯಾದರೂ ಬಜೆಟ್‌ನ ಅಂಕಿಅಂಶಗಳಲ್ಲಿ ಕಾರ್ಯಾನುಷ್ಠಾನಕ್ಕೆ ಪುಷ್ಟಿ ಕಂಡುಬರುವುದಿಲ್ಲ. ತೆರಿಗೆ ಸಂಗ್ರಹ ಹಾಗೂ ಇತರ ಮೂಲಗಳಿಂದ ಬರುವ ವರಮಾನ ಕಡಿಮೆಯಾಗಲಿದೆ. ಜಿಎಸ್‌ಟಿ ಸಂಗ್ರಹ ಕಡಿಮೆ ಆಗಿರುವು
ದರಿಂದ ತನ್ನ ಜನಪ್ರಿಯ ಕಾರ್ಯಕ್ರಮಗಳಿಗೆ ಹಣಕಾಸು ಹೊಂದಿಸಲು ಸರ್ಕಾರವು ಹಣಕ್ಕಾಗಿ ಬಾಂಡ್‌ಗಳು ಹಾಗೂ ಸಾಲದ ಮೊರೆಹೋಗುವುದು ಅನಿವಾರ್ಯವಾಗಿದೆ. ಕರ್ನಾಟಕ ಸರ್ಕಾರಕ್ಕೆ ಉತ್ತಮ ಬಜೆಟ್ ಮಂಡಿಸುವ ಅವಕಾಶವನ್ನೂ ಇದು ಸೃಷ್ಟಿಸಿದೆ. ಅದರ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಲು ಇದು ಸಕಾಲವಾಗಿದೆ.

ರೈತರಿಗೆ ದೂರದ ಬೆಟ್ಟ: ಬರೀ ದೂರದ ಬೆಟ್ಟ ತೋರಿಸುವ ಬದಲು ರೈತರು ಹಾಗೂ ಕೃಷಿಗಾಗಿ ಇನ್ನೂ ಹೆಚ್ಚಿನದನ್ನು ನೀಡಬಹುದಾಗಿತ್ತು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಬೇಡುತ್ತಿರುವ ಬೇರುಮಟ್ಟದವರನ್ನು ಬಜೆಟ್ ತಲುಪಿಲ್ಲ. ರೈತರು ತಮ್ಮ ಫಸಲನ್ನು ಮಾರುವ ಸಂದರ್ಭದಲ್ಲಿ ಮಾರುಕಟ್ಟೆ ದರವನ್ನು ದೃಷ್ಟಿಯಲ್ಲಿಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಯೋಜನೆಯನ್ನು ಜಾರಿಗೆ ತರಬೇಕಿತ್ತು. ಅಷ್ಟೇ ಅಲ್ಲದೇ ದೂರದ ಸ್ಥಳಗಳಿಗೆ ಮಾರಾಟ ಮಾಡಲು ವೇಗವಾಗಿ ಬೆಳೆಗಳನ್ನು ತಲುಪಿಸುವ ರಸ್ತೆ ಹಾಗೂ ವಿಮಾನ ಸಾರಿಗೆ ಸೌಕರ್ಯ ಕಲ್ಪಿಸಬೇಕಿತ್ತು.

ಗ್ರಾಮೀಣ ಕೃಷಿ ಮಾರುಕಟ್ಟೆ ಯೋಜನೆ ಚೆನ್ನಾಗಿದೆ. ಆದರೆ, ಈಗಿನ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯಿಂದ ಅದು ದೊಡ್ಡ ಮಟ್ಟದ ಪ್ರತಿರೋಧ ಎದುರಿಸಲಿದೆ.

ಕಾರ್ಪೊರೇಟ್ ವಲಯಕ್ಕೆ ಅಚ್ಚರಿ: ಹಣಕಾಸು ಸಚಿವರಿಂದ ಕಾರ್ಪೊರೇಟ್ ವಲಯದವರಿಗೆ ಕೆಲವು ಅಚ್ಚರಿಗಳು ಸಿಕ್ಕಿವು. ಈ ವಲಯದ ಎಂಎಸ್‌ಎಂಇಗಳು ತೆರಿಗೆಯಲ್ಲಿ ಇಳಿಕೆ ನಿರೀಕ್ಷಿಸಿದ್ದವು. ಆದರೆ, ಈಗ ₹ 50 ಕೋಟಿವರೆಗಿನ ವಹಿವಾಟಿನ ಮೇಲೆ ಇರುವ ಶೇ 25ರಷ್ಟು ತೆರಿಗೆ ಪ್ರಮಾಣವನ್ನು ₹ 250 ಕೋಟಿ ವಹಿವಾಟಿನವರೆಗೆ ವಿಸ್ತರಿಸಲಾಗಿದೆ.

ಇ–ವೇ ಬಿಲ್‌ಗಳು ಹಾಗೂ ಜಿಎಸ್‌ಟಿಯಲ್ಲಿ ಪೂರೈಕೆದಾರನ ಬದಲಿಗೆ ಸರಕು ಮತ್ತು ಸೇವೆ ಸ್ವೀಕರಿಸುವ ವ್ಯಕ್ತಿಯೇ ತೆರಿಗೆ ಪಾವತಿಸಲು ಬಾಧ್ಯಸ್ಥನಾಗಿರುವ ವ್ಯವಸ್ಥೆ (ರಿವರ್ಸ್‌ ಚಾರ್ಜ್ ಮೆಕ್ಯಾನಿಸಂ–ಆರ್‌ಸಿಎಂ–) ಈ ಕ್ಷೇತ್ರದವರಿಗೆ ಕಠಿಣವಾಗಿ ಪರಿಣಮಿಸಿವೆ. ಇದರಿಂದ ಅವರ ಲಾಭ ಕೊಂಚವೇ ಹೆಚ್ಚಲಿದ್ದು, ಪಾವತಿಸಬೇಕಾದ ತೆರಿಗೆ ಮಾತ್ರ ಈಗಿನ ಪ್ರಮಾಣಕ್ಕಿಂತ ಅಧಿಕವಾಗಲಿದೆ. ಹೀಗಾಗಿ ಸರ್ಕಾರವು ₹ 50 ಕೋಟಿವರೆಗಿನ ವಹಿವಾಟಿನ ಮೇಲಿನ ತೆರಿಗೆಯನ್ನು ಶೇ 20ಕ್ಕೆ ಇಳಿಸಿದ್ದರೆ ಅದು ವಿವೇಕಯುತ ತೀರ್ಮಾನವಾಗುತ್ತಿತ್ತು. ಹೋಳಿಗೆಯಲ್ಲಿ ಹೂರಣವಿಲ್ಲದಂಥ ಬಜೆಟ್ ಇದು.

ತೈಲ ಬೆಲೆಗಳು ಪಾವತಿಯ ಸಮತೋಲನದ ಮೇಲೆ ಖಂಡಿತ ಪರಿಣಾಮ ಬೀರಲಿವೆ. ಹಿರಿಯ ನಾಗರಿಕರನ್ನು ಹೊರತುಪಡಿಸಿ ಮಿಕ್ಕವರ ಯೋಗಕ್ಷೇಮವನ್ನು ಸರ್ಕಾರ ಅರ್ಧಂಬರ್ಧ ವಿಚಾರಿಸಿಕೊಂಡಂತಿದೆ. ಮೊಬೈಲ್ ಫೋನ್‌ಗಳು ಐಷಾರಾಮಿ ಸಾಧನಗಳಾಗಿರುವುದರಿಂದ ಅವುಗಳ ಬೆಲೆಯನ್ನು ಏರಿಸಿರುವುದು ಕೂಡ ಸ್ವಾಗತಾರ್ಹವೇ.

ವಿದೇಶಿ ನೇರ ಬಂಡವಾಳ ಹೂಡಿಕೆಯು ಉದ್ಯೋಗಾವಕಾಶ ಹೆಚ್ಚಿಸುತ್ತದೆ ಎನ್ನುವುದೇನೋ ನಿಜ. ಆದರೆ, ಎಂಎಸ್‌ಎಂಇಗಳಲ್ಲಿ ವಿಶೇಷವಾಗಿ ಚಿಲ್ಲರೆ ವ್ಯಾಪಾರಿಗಳ ಉತ್ಪಾದನೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ತಂತ್ರಜ್ಞಾನ ಹಾಗೂ ಸೇವೆಗಳು ಭಾರತೀಯ ರಫ್ತು ಆದಾಯದ ಮುಖ್ಯ ಶಕ್ತಿಗಳು. ಆದರೆ, ಕೌಶಲಾಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಯಾವ ರೀತಿ ಫಲ ಕೊಡುತ್ತವೆ ಎಂದು ಗೊತ್ತಾಗಲು ಇನ್ನು ಮೂರು ವರ್ಷಗಳಾದರೂ ಬೇಕು.

(ಆರ್‌.ಜಿ. ಮುರಳೀಧರ,ಲೇಖಕರು ತೆರಿಗೆ ಸಲಹೆಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.