ADVERTISEMENT

ಸಾಗಬೇಕಾದ ದಾರಿ ಇನ್ನೂ ದೂರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 16:42 IST
Last Updated 2 ಜುಲೈ 2019, 16:42 IST
ಸಾಗಬೇಕಾದ ದಾರಿ ಇನ್ನೂ ದೂರ
ಸಾಗಬೇಕಾದ ದಾರಿ ಇನ್ನೂ ದೂರ   

ವಿಶ್ವಸಂಸ್ಥೆ ಹಾಕಿಕೊಂಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಪ್ರಕಾರ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಎಲ್ಲ ವಿಧದ ಶೋಷಣೆಗಳಿಗೆ 2030ರ ವೇಳೆಗೆ ಅಂತ್ಯ ಹಾಡಬೇಕು. ಈ ಗುರಿಯನ್ನು ಕೇವಲ ಮಾನವ ಹಕ್ಕನ್ನಾಗಿ ನೋಡದೆ ಸುಸ್ಥಿರ ಅಭಿವೃದ್ಧಿಯ ವೇಗವರ್ಧಕವನ್ನಾಗಿಯೂ ಕಾಣಬೇಕು ಎನ್ನುವುದು ಎಸ್‌ಡಿಜಿ ಆಶಯ.

ಮಹಿಳೆಯರಿಗೆ ಸಮಾನ ಉದ್ಯೋಗಾವಕಾಶಗಳನ್ನು ಒದಗಿಸಲು ಇದುವರೆಗೆ ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಲಾಗಾಯ್ತಿನಿಂದಲೂ ಎಲ್ಲ ಅವಕಾಶಗಳನ್ನು ನಿರಾಕರಿಸುತ್ತಾ ಈ ವರ್ಗವನ್ನು ವ್ಯವಸ್ಥಿತವಾಗಿ ತುಳಿಯುತ್ತಾ ಬರಲಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ, ನಿಕೃಷ್ಟ ವೇತನ, ಮನೆ ಕೆಲಸ, ಸಾರ್ವಜನಿಕ ರಂಗದಲ್ಲಿ ಮುಂದುವರಿದ ತಾರತಮ್ಯ – ಇಂತಹ ಸಮಸ್ಯೆಗಳು ಲಿಂಗ ಸಮಾನತೆಯ ಆಶಯಕ್ಕೆ ಅಡ್ಡಿಯಾಗಿವೆ. ಆದರೆ, ಮಹಿಳಾ ಸಬಲೀಕರಣದ ಪ್ರಭಾವವು ಎಲ್ಲ ವಲಯಗಳ ಪ್ರಗತಿಗೆ ಪೂರಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಚಾಲಕ ಎನ್ನುವುದು ಈಗಾಗಲೇ ನಿರೂಪಿತವಾಗಿರುವ ಸತ್ಯವಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಗುರುವಾರ ಮಂಡಿಸಿದ 2018–19ನೇ ಸಾಲಿನ ಬಜೆಟ್‌ನಲ್ಲಿ ದೇಶದ ಆರ್ಥವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಹೆಚ್ಚಿನ ಪ್ರಮಾಣದ ಸ್ತ್ರೀಶಕ್ತಿ ಕಾಣಿಸಿಕೊಳ್ಳಬೇಕು ಎನ್ನುವ ಆಶಯವೇನೋ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌) ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವ ಮುಂದಿಡಲಾಗಿದೆ. ಹೊಸದಾಗಿ ಕೆಲಸಕ್ಕೆ ಸೇರುವ ಮಹಿಳಾ ಕಾರ್ಮಿಕರ ವಂತಿಗೆಯನ್ನು ಮೊದಲ ಮೂರು ವರ್ಷದ ಅವಧಿಗೆ ಸದ್ಯದ ಶೇ 12ರಿಂದ ಶೇ 8ಕ್ಕೆ ಇಳಿಸಲು ಉದ್ದೇಶಿಸಲಾಗಿದೆ (ಆದರೆ, ಉದ್ಯೋಗದಾತರು ನೀಡಬೇಕಾದ ವಂತಿಗೆಯಲ್ಲಿ ಯಾವುದೇ ಬದಲಾವಣೆ ಇರದು). ಮಹಿಳೆಯರು ಮನೆಗೆ ಹೆಚ್ಚಿನ ಸಂಬಳ ಒಯ್ಯಲು ಇದರಿಂದ ಸಾಧ್ಯವಾಗ
ಲಿದ್ದು, ಸಂಘಟಿತ ವಲಯದಲ್ಲಿ ಅವರು ಉದ್ಯೋಗಕ್ಕೆ ಸೇರುವ ಅವಕಾಶಗಳು ಹೆಚ್ಚಿದಂತಾಗಿದೆ.

ADVERTISEMENT

ಆರ್ಥಿಕ ಸಮೀಕ್ಷೆ ಪ್ರಕಾರ, 2005–06ರಲ್ಲಿ ಶೇ 36ರಷ್ಟಿದ್ದ ಮಹಿಳಾ ಕಾರ್ಮಿಕರ ಸಂಖ್ಯೆ 2015–16ರ ವೇಳೆಗೆ ಶೇ 24ಕ್ಕೆ ಕುಸಿದಿದೆ. ಅದೇ ಜಾಗತಿಕ ಪ್ರಮಾಣ ಶೇ 40ರಷ್ಟಿದೆ. ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ಅಗತ್ಯ ಎಷ್ಟಿದೆ ಎಂಬುದನ್ನು ಈ ಅಂಕಿ–ಅಂಶಗಳೇ ಹೇಳುತ್ತವೆ. ಇಪಿಎಫ್‌ ಕಾಯ್ದೆಗೆ ತಿದ್ದುಪಡಿ ತರುವುದಲ್ಲದೆ ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನೂ ಶೇ 37ರಷ್ಟು ಹೆಚ್ಚಿಸುವ (2019ರ ಮಾರ್ಚ್‌ ವೇಳೆಗೆ ₹ 75 ಸಾವಿರ ಕೋಟಿ ಸಾಲ ವಿತರಿಸುವ ಗುರಿ) ನಿರ್ಧಾರ ಕೈಗೊಳ್ಳಲಾಗಿದೆ. ಉಜ್ವಲ ಯೋಜನೆ ಮೂಲಕ ಒಟ್ಟಾರೆ ಎಂಟು ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. ಈ ಕ್ರಮಗಳು ಮಹಿಳೆಯರ ಅಭಿವೃದ್ಧಿಗೆ ಪೂರಕ ಎಂದೇ ಹೇಳಬೇಕು.

ಸೌಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪ್ರಸ್ತಾವವೂ ಬಜೆಟ್‌ನಲ್ಲಿದೆ. ಸ್ತ್ರೀಸಂಕುಲದಲ್ಲಿ ಈ ಯೋಜನೆ ಕೂಡ ಧನಾತ್ಮಕ ಬದಲಾವಣೆ ತರುವ ಸಾಧ್ಯತೆ ಇದೆ. ಮಹಿಳಾ ಸ್ವ–ಸಹಾಯ ಗುಂಪುಗಳು ಸಾವಯವ ಕೃಷಿ ಕೈಗೊಳ್ಳಲು ಸಹ ಉತ್ತೇಜನ ನೀಡಲಾಗಿದೆ. ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಗೆ (ಎನ್‌ಎನ್‌ಎಂ) ಹೆಚ್ಚಿನ ಅನುದಾನ ಒದಗಿಸಿರುವುದು ಸ್ವಾಗತಾರ್ಹವಾ
ಗಿದೆ. ಗರ್ಭಿಣಿಯರ ರಕ್ತಹೀನತೆ, ಕಡಿಮೆ ತೂಕದ ಶಿಶುಗಳ ಜನನದಂತಹ ತೊಂದರೆಗಳನ್ನು ಹೋಗಲಾಡಿಸುವ ಗುರಿಯನ್ನು ಎನ್‌ಎನ್‌ಎಂ ಹಾಕಿಕೊಂಡಿದೆ. ಮಹಿಳೆಯರ ಸುರಕ್ಷತೆ ಇಂದಿನ ತುರ್ತು ಅಗತ್ಯ. ನಿರ್ಭಯ ನಿಧಿಗೆ ₹ 500 ಕೋಟಿಯನ್ನು ಒದಗಿಸಲಾಗಿದೆ.

ಮುಖ್ಯ ಆರ್ಥಿಕ ಸಂಪನ್ಮೂಲಗಳಾದ ಭೂಮಿ ಹಾಗೂ ಆಸ್ತಿಗಳ ಮೇಲೆ ಮಹಿಳೆಯರಿಗೂ ಸಮಾನ ಹಕ್ಕು ಒದಗಿಸಿದರೆ ಅಭಿವೃದ್ಧಿಯ ಗುರಿಗಳನ್ನು ತಲುಪಲು ಸಾಧ್ಯವಾಗಲಿದೆ. ಹಾಗೆಯೇ ಸಾರ್ವಜನಿಕ ರಂಗದಲ್ಲಿರುವ ಮಹಿಳಾ ಮುಂದಾಳುಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಅಗತ್ಯವೂ ಇದೆ. ಬಜೆಟ್‌ನಲ್ಲಿ ಇಂತಹ ಸುಧಾರಣಾ ಕ್ರಮಗಳ ನಿರೀಕ್ಷೆಯೂ ಇತ್ತು. ಏಕೆಂದರೆ, ಉದ್ದಿಮೆ ವಲಯದಲ್ಲಿ ದೊಡ್ಡ ಹುದ್ದೆಗಳಲ್ಲಿರುವ ಮಹಿಳೆಯರ ಪ್ರಮಾಣ ಶೇ 24ರಷ್ಟು ಮಾತ್ರ. ಅಲ್ಲದೆ, ಶೇ 33ರಷ್ಟು ಉದ್ದಿಮೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವೇ ಇಲ್ಲ. ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ದೇಶಗಳಲ್ಲಿ ಆ ಮಟ್ಟಿಗಿನ ಅಭಿವೃದ್ಧಿಗೆ ಲಿಂಗ ಸಮಾನತೆಯೇ ಕಾರಣವಾಗಿದೆ. ಆ ಗುರಿ ಸಾಧಿಸಲು ನಮ್ಮ ದೇಶ ಸಾಗಬೇಕಾದ ದಾರಿ ಇನ್ನೂ ದೂರವಿದೆ.

ಪಂಕಜಮ್‌ ಶ್ರೀದೇವಿ ( ಲೇಖಕಿ: ಬಿಸಿಐಸಿ ಅಧ್ಯಕ್ಷೆ ಹಾಗೂ ಎಎನ್‌ಜೆಡ್‌ ಆಪರೇಷನ್ಸ್‌ ಅಂಡ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.