ADVERTISEMENT

ದೆಹಲಿ ಬಾಲಕನ ನಿಗೂಢ ಸಾವು–ಮೂವರ ಬಂಧನ

ಪಿಟಿಐ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST

ನವದೆಹಲಿ: ಇಲ್ಲಿನ ಕರವಾಲ್‌ ನಗರದ ಜೀವನ್‌ಜ್ಯೋತಿ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಹಪಾಠಿಗಳನ್ನು ಬಂಧಿಸಲಾಗಿದೆ.

ಗುರುವಾರ 16 ವರ್ಷದ ವಿದ್ಯಾರ್ಥಿ ತುಷಾರ್‌ ಶಾಲೆಯ ಬಾತ್‌ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆತನನ್ನು ಕೂಡಲೇ ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯದಲ್ಲೇ ಆತ ಸಾವನ್ನಪ್ಪಿದ್ದ. ಈತ ಅತಿಸಾರದಿಂದ ಬಳಲುತ್ತಿದ್ದ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಕೆಲವು ವಿದ್ಯಾರ್ಥಿಗಳು ಮಗನ ಮೇಲೆ ಹಲ್ಲೆ ನಡೆಸಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ಹೆತ್ತವರು ಆರೋಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಮೃತ ಬಾಲಕನ ದೇಹದಲ್ಲಿ ಗಾಯವಾದ ಯಾವುದೇ ಗುರುತುಗಳಿಲ್ಲ. ಬಾಲಕನ ಹೆತ್ತವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

ಶಾಲೆಯ ಮುಂದೆ ಪ್ರತಿಭಟನೆ: ಶಾಲಾ ಆಡಳಿತ ಮಂಡಳಿಯೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿ ಕುಟುಂಬ ಸದಸ್ಯರು ದೂರಿದರು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕುಟುಂಬ ಸದಸ್ಯರ ಜತೆಗೂಡಿ ಸ್ಥಳೀಯ ನಿವಾಸಿಗಳು ಕರವಾಲ್‌ ನಗರದ ಚೌಕದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಭೇಟಿಯಾದ ಸ್ಥಳೀಯ ಶಾಸಕ ಕಪಿಲ್‌ ಮಿಶ್ರಾ, ಪರಿಸ್ಥಿತಿಯನ್ನು ಪರಾಮರ್ಶೆ ನಡೆಸುತ್ತಿದ್ದು, ಪೊಲೀಸರು, ಆಸ್ಪತ್ರೆ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದರು.
**
ಮೂವರು ಸಹಪಾಠಿಗಳ ಬಂಧನ
‘ಬಾಲಕನ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮೂವರು ಸಹಪಾಠಿಗಳನ್ನು ಬಂಧಿಸಲಾಗಿದೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಶೌಚಾಲಯ ಸಮೀಪ ಕೆಲವು ವಿದ್ಯಾರ್ಥಿಗಳ ಜತೆಗೆ ಗಲಾಟೆ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಕಂಡುಬಂದಿದೆ. ಒಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ನೈಜ ಕಾರಣ ತಿಳಿದುಬರಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.