ADVERTISEMENT

ಮಹಾರಾಷ್ಟ್ರದ 11,700 ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರಿಗೆ ವಜಾ ಭೀತಿ

ಏಜೆನ್ಸೀಸ್
Published 4 ಫೆಬ್ರುವರಿ 2018, 5:58 IST
Last Updated 4 ಫೆಬ್ರುವರಿ 2018, 5:58 IST
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ (ಸಂಗ್ರಹ ಚಿತ್ರ)
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ (ಸಂಗ್ರಹ ಚಿತ್ರ)   

ಮುಂಬೈ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋಟಾದಡಿ (ಎಸ್‌ಸಿ, ಎಸ್‌ಟಿ) ನಕಲಿ ಪ್ರಮಾಣಪತ್ರ ತೋರಿಸಿ ಉದ್ಯೋಗಕ್ಕೆ ಸೇರಿದವರನ್ನು ವಜಾಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದಿಂದ ಮಹಾರಾಷ್ಟ್ರದ 11,700 ಸರ್ಕಾರಿ ನೌಕರರು ಆತಂಕಕ್ಕೆ ಒಳಗಾಗುವಂತಾಗಿದೆ.

ಸುಪ್ರೀಂ ಕೋರ್ಟ್ ಆದೇಶ ನೀಡಿ ಸುಮಾರು 7 ತಿಂಗಳು ಕಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕೆಂಬುದು ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

ಒಂದು ವೇಳೆ ವಜಾ ಮಾಡಲು ಮುಂದಾದರೆ ಸಾವಿರಾರು ಸಂಖ್ಯೆಯ ನೌಕರರ ವಿರೋಧ ಎದುರಿಸಬೇಕಾಗಿ ಬರಲಿದೆ. ಮಾಡದಿದ್ದರೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದಂತಾಗುತ್ತದೆ. ಬುಡಕಟ್ಟು ಜನಾಂಗದವರು ಎಂದು ಹೇಳಿಕೊಂಡ ಅನೇಕ ನೌಕರರು ಎರಡು ದಶಕಗಳಿಗೂ ಹೆಚ್ಚು ಕಾಲ ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಗುಮಾಸ್ತರಾಗಿ ಉದ್ಯೋಗಕ್ಕೆ ನೇಮಕಗೊಂಡ ಅನೇಕರು ಇಂದು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗೇರಿದ್ದಾರೆ ಎನ್ನಲಾಗಿದೆ.

ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಅಥವಾ ಉದ್ಯೋಗಕ್ಕೆ ಸೇರಿಕೊಂಡಿದ್ದರೆ ಅಂಥವರು ತಮ್ಮ ಪದವಿ ಅಥವಾ ಉದ್ಯೋಗ ಕಳೆದುಕೊಳ್ಳಬೇಕಾಗಲಿದೆ ಎಂದು ಸುಪ್ರೀಂ ಕೋರ್ಟ್ 2017ರ ಜುಲೈನಲ್ಲಿ ಹೇಳಿತ್ತು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.