ADVERTISEMENT

ಮಾಜಿ ಉದ್ಯೋಗಿಯಿಂದಲೇ ಪೇಟಿಎಂಗೆ ವಂಚನೆ

ಪಿಟಿಐ
Published 4 ಫೆಬ್ರುವರಿ 2018, 19:31 IST
Last Updated 4 ಫೆಬ್ರುವರಿ 2018, 19:31 IST

ನವದೆಹಲಿ: ಉದ್ಯೋಗಿಗಳ ಗುರುತಿನ ಸಂಖ್ಯೆ ಹಾಗೂ ಡಿಫಾಲ್ಟ್ ಪಾಸ್‌ವರ್ಡ್ (ಲಾಗ್ ಇನ್ ಆದ ತಕ್ಷಣ ಮೊದಲ ಬಾರಿ ತಾನೇತಾನಾಗಿ ಕಾಣಿಸಿಕೊಳ್ಳುವ ಗುಪ್ತಸಂಖ್ಯೆ) ಬಳಸಿಕೊಂಡು ಪೇಟಿಎಂ ಸಂಸ್ಥೆಗೆ ವಂಚಿಸಿದ್ದ ಮಾಜಿ ಉದ್ಯೋಗಿಯ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.

ವಂಚನೆಯ ಸಂಚುಕೋರ ಸಾವನ್ ನರೇಂದರ್ ಅವಾರೆ ಜೊತೆ ಸೂರಜ್ ಠಾಕೂರ್, ಪುರುಷೋತ್ತಮ್ ಯಾದವ್, ದೀಪಕ್ ಯಾದವ್, ತುಷಾರ್ ರೇವಾರಿಯ ಹಾಗೂ ರಾಜೇಶ್ ಮೇಹೊ ಎಂಬುವವರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆ ಆರೋಪ ಹೊರಿಸಲಾಗಿದೆ.

‘ಪೇಟಿಎಂ ಕಂಪನಿಯಲ್ಲಿ ಎರಡು ತಿಂಗಳು ಕೆಲಸ ಮಾಡಿದ್ದ ಸಾವನ್‌ ಅಲ್ಲಿನ ಮರುಪಾವತಿ ಪ್ರಕ್ರಿಯೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಉತ್ಪನ್ನದ ಬೆಲೆಯ ಶೇ 20ರಿಂದ ಶೇ 50ರವರೆಗೆ ಮರುಪಾವತಿ ಮಾಡುವುದಾಗಿ ಆಮಿಷ ಒಡ್ಡಿ ಪೇಟಿಎಂ ಜಾಲತಾಣದ ಮೂಲಕ ಹಲವು ಉತ್ಪನ್ನಗಳನ್ನು ಮಾರಾಟ ಮಾಡಿದ್ದಾನೆ. ಆದರೆ ಕಂಪನಿಯ ವ್ಯವಸ್ಥೆಯನ್ನು ಬಳಸಿಕೊಂಡು ಈ ವಸ್ತುಗಳಿಗೆ ಆತ ಶೇ 100ರಷ್ಟು ಮರುಪಾವತಿಯನ್ನು ಮಾಡಿಕೊಂಡಿದ್ದಾನೆ’ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಈ ಕೃತ್ಯದಿಂದ 2015ರ ಆಗಸ್ಟ್‌ನಿಂದ ಮೇ ಒಳಗಾಗಿ ₹ 11 ಲಕ್ಷ ನಷ್ಟವಾಗಿದೆ. ಗ್ರಾಹಕರ ಖಾತೆಯನ್ನು ಪರಿಶೀಲಿಸುವ ವೇಳೆ ಇದು ಬೆಳಕಿಗೆ ಬಂದಿದೆ’ ಎಂದು ಸಿಬಿಐ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.