ADVERTISEMENT

ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು: ಅಮಿತ್ ಶಾ

ಏಜೆನ್ಸೀಸ್
Published 5 ಫೆಬ್ರುವರಿ 2018, 11:55 IST
Last Updated 5 ಫೆಬ್ರುವರಿ 2018, 11:55 IST
ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು: ಅಮಿತ್ ಶಾ
ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು: ಅಮಿತ್ ಶಾ   

ನವದೆಹಲಿ: ಎನ್‌ಡಿಎ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಅಮಿತ್ ಶಾ ಹೇಳಿದರು.

ರಾಜ್ಯಸಭೆಯಲ್ಲಿ ಚೊಚ್ಚಲ ಭಾಷಣ ಮಾಡಿದ ಅವರು, ಪಕೋಡಾ ಮಾರುವವರನ್ನು ನಿರುದ್ಯೋಗಿಗಳು ಎಂದು ಪರಿಗಣಿಸಲಾಗದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ವ್ಯಂಗ್ಯವಾಡುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು ಎಂದು ಹೇಳಿರುವ ಅಮಿತ್ ಶಾ, ‘ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು ಪಕೋಡಾ ಮಾರಾಟ ಮಾಡುವುದನ್ನು ಭಿಕ್ಷೆ ಬೇಡುವುದರ ಜತೆ ಹೋಲಿಸಿದ್ದಾರೆ. ಪಕೋಡಾ ಮಾರಾಟ ಮಾಡುವವರು ಸ್ವ ಉದ್ಯೋಗಿಗಳು. ಅವರನ್ನು ನೀವು ಭಿಕ್ಷುಕರ ಜತೆ ಹೋಲಿಸಬಹುದೇ’ ಎಂದು ಪ್ರಶ್ನಿಸಿದರು. ಅಲ್ಲದೆ, ಚಹಾ ಮಾರುವವನ ಮಗ ದೇಶದ ಪ್ರಧಾನಿಯಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.

ADVERTISEMENT

‘ನಿರುದ್ಯೋಗವನ್ನು ನಾನು ನಿರಾಕರಿಸುತ್ತಿಲ್ಲ. ಇದು ನೀವು 55 ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕದ ಸ್ಥಿತಿ. ಯಾಕೆ ಕಾಂಗ್ರೆಸ್ ಇದಕ್ಕೆ ಪರಿಹಾರ ಕಂಡುಕೊಳ್ಳಲಿಲ್ಲ’ ಎಂದು ಪ್ರತಿಪಕ್ಷದ ವಿರುದ್ಧವೇ ಶಾ ಹರಿಹಾಯ್ದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಲೇವಡಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಶಾ, ‘ಇದು ಡಕಾಯಿತಿಯೇ? ಕಾನೂನು ಪ್ರಕಾರ ಜಾರಿಗೆ ತಂದ ತೆರಿಗೆ ಪದ್ಧತಿ ಹೇಗೆ ಡಕಾಯಿತಿ ಆಗಲು ಸಾಧ್ಯ? ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತಂದ ಮಹತ್ವದ ಸುಧಾರಣಾ ಕ್ರಮ ಜಿಎಸ್‌ಟಿ’ ಎಂದು ಬಣ್ಣಿಸಿದರು.

ಅಮಿತ್ ಶಾ ಭಾಷಣದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹಾಜರಿದ್ದರು.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆ: ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪಕೋಡಾ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಆಜಂ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.