ADVERTISEMENT

ಪೊಲೀಸರ ಮೇಲೆ ದಾಳಿ: ಉಗ್ರ ಪರಾರಿ

ಶ್ರೀನಗರ ಆಸ್ಪತ್ರೆ ಆವರಣದಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
ಪೊಲೀಸರ ಮೇಲೆ ದಾಳಿ: ಉಗ್ರ ಪರಾರಿ
ಪೊಲೀಸರ ಮೇಲೆ ದಾಳಿ: ಉಗ್ರ ಪರಾರಿ   

ಶ್ರೀನಗರ: ಇಲ್ಲಿನ ಶ್ರೀ ಮಹಾರಾಜ ಹರಿಸಿಂಗ್‌ ಆಸ್ಪತ್ರೆಯ ಆವರಣದಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು, ಪೊಲೀಸರ ವಶದಲ್ಲಿದ್ದ ಉಗ್ರ ನವೀದ್‌ ಜಟ್‌ ಅಲಿಯಾಸ್‌ ಅಬು ಹಂಜುಲ್ಲಾ ಎಂಬಾತನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.

ಉಗ್ರರ ಗುಂಡಿನ ದಾಳಿಯಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡರು. ಅವರಲ್ಲೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನವೀದ್‌ ಮತ್ತು ಇತರ ಐವರು ಕೈದಿಗಳನ್ನು ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ.

ADVERTISEMENT

ಇದೊಂದು ಪೂರ್ವಯೋಜಿತ ಕೃತ್ಯ. ನವೀದ್‌ನನ್ನು ಬಿಡಿಸಿಕೊಳ್ಳುವ ಉದ್ದೇಶದಿಂದಲೇ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

‘ಕೈದಿಗಳನ್ನು ಆಸ್ಪತ್ರೆಗೆ ಕರೆತರುವ ಮೊದಲೇ ನವೀದ್‌ನ ಸಹಚರರುಆಸ್ಪತ್ರೆಯ ಆವರಣದಲ್ಲಿ ಸೇರಿಕೊಂಡಿದ್ದರು. ಆಸ್ಪತ್ರೆ ಆವರಣಕ್ಕೆ ಬಂದ ತಕ್ಷಣ ಕಾನ್‌ಸ್ಟೆಬಲ್‌ವೊಬ್ಬರ ಕೈಯಿಂದ ನವೀದ್‌ ಬಂದೂಕು ಕಿತ್ತುಕೊಂಡ. ಅಲ್ಲಿದ್ದ ಇತರ ಉಗ್ರರು ಆತನಿಗೆ ನೆರವಾದರು’ ಎಂದು ಮೂಲಗಳು ಘಟನೆಯನ್ನು ವಿವರಿಸಿವೆ.

ಪುಲ್ವಾಮ ಜಿಲ್ಲೆಯನ್ಯಾಯಾಲಯವೊಂದರ ಸಮೀಪ ಎಎಸ್‌ಐ ಒಬ್ಬರ ಹತ್ಯೆ ಪ್ರಕರಣದಲ್ಲಿ ಪಾಕಿಸ್ತಾನದ ನವೀದ್‌ನನ್ನು 2014ರಲ್ಲಿ ಬಂಧಿಸಲಾಗಿತ್ತು. ನವೀದ್‌, ಲಷ್ಕರ್‌–ಎ–ತಯ್ಯಿಬಾ ಕಮಾಂಡರ್ ಆಗಿದ್ದ ಅಬು ದುಜಾನಾ ಎಂಬಾತನ ಆಪ್ತನಾಗಿದ್ದ. ಕಳೆದ ವರ್ಷ ನಡೆದ ಎನ್‌ಕೌಂಟರ್‌ನಲ್ಲಿ ದುಜಾನಾ ಸಾವಿಗೀಡಾಗಿದ್ದಾನೆ.

‘ನವೀದ್‌ನನ್ನು ಆಸ್ಪತ್ರೆಗೆ ಕರೆತರುವ ವಿಚಾರ ಉಗ್ರರಿಗೆ ಹೇಗೆ ತಿಳಿಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಪೊಲೀಸ್‌ ಇಲಾಖೆಯೊಳಗಿನವರ  ಪಾತ್ರ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ, ಉಗ್ರರ ದಾಳಿಯ ರೀತಿಯನ್ನು ಗಮನಿಸಿದರೆ ಅವರಿಗೆ ನವೀದ್‌ನನ್ನು ಕರೆತರುವ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು ಅನಿಸುತ್ತದೆ. ಕೈದಿಗಳ ಜತೆಗೆ ಎಷ್ಟು ಪೊಲೀಸರು ಇರುತ್ತಾರೆ ಎಂಬುದೂ ಅವರಿಗೆ ತಿಳಿದಿತ್ತು’ ಎಂದು ಹಿರಿಯ ‍ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೀದ್‌ನನ್ನು ಶ್ರೀನಗರದ ಹೊರಗಿನ ಹೆಚ್ಚು ಸುರಕ್ಷಿತ ಸೆರೆಮನೆಗೆ ಸ್ಥಳಾಂತರಿಸಲು ಪೊಲೀಸರು ಬಯಸಿದ್ದರು. ಆದರೆ ಅದಕ್ಕೆ ಸ್ಥಳೀಯ ನ್ಯಾಯಾಲಯ ಅವಕಾಶ ಕೊಟ್ಟಿರಲಿಲ್ಲ.

ಶ್ರೀನಗರದಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ನವೀದ್‌ ಮತ್ತು ಇತರ ಉಗ್ರರನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.