ADVERTISEMENT

‘ಮುಖ್ಯಮಂತ್ರಿ ವಿರುದ್ಧದ ಆರೋಪ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:36 IST
Last Updated 9 ಫೆಬ್ರುವರಿ 2018, 19:36 IST
‘ಮುಖ್ಯಮಂತ್ರಿ ವಿರುದ್ಧದ ಆರೋಪ ಸರಿಯಲ್ಲ’
‘ಮುಖ್ಯಮಂತ್ರಿ ವಿರುದ್ಧದ ಆರೋಪ ಸರಿಯಲ್ಲ’   

ನವದೆಹಲಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂಗಳ ಭಾವನೆಗಳೊಂದಿಗೆ ಚಕ್ಕಂದ ಆಡುತ್ತಿದ್ದಾರೆ’ ಎಂಬ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಆರೋಪ ಸರಿಯಲ್ಲ ಎಂದು ಕಾಂಗ್ರೆಸ್‌ ಸಂಸದರು ಅಭಿಪ್ರಾಯಪಟ್ಟರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರಾದ ಆರ್‌.ಧ್ರುವನಾರಾಯಣ ಹಾಗೂ ಎಸ್‌.ಪಿ. ಮುದ್ದಹನುಮೇಗೌಡ, ಮಠಗಳು ಮತ್ತು ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿ ಸೇರಿಸುವ ನಿಟ್ಟಿನಲ್ಲಿ ಹೈಕೋರ್ಟ್‌ ಆದೇಶ ಪಾಲಿಸಲು ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಲೆಂದೇ ಪ್ರಕಟಣೆ ಹೊರಡಿಸಿತ್ತು ಎಂದರು.

ಸರ್ಕಾರ ಪ್ರಕಟಣೆ ಹಿಂದಕ್ಕೆ ಪಡೆದಿರುವುದರಿಂದ ಮುಖ್ಯಮಂತ್ರಿ ವಿರುದ್ಧ ಈ ರೀತಿ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದ ಅವರು, ಶಾಂತಿ, ಸೌಹಾರ್ದಕ್ಕೆ ಹೆಸರಾಗಿರುವ ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಕರಾವಳಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ಸಂಸದರು, ಸಾಮರಸ್ಯ ಹಾಳುಗೆಡಹುವ ಕೆಲಸ ಮಾಡುತ್ತಿದ್ದಾರೆ. ಅದರ ಬದಲಿಗೆ, ರಾಜ್ಯ ಸರ್ಕಾರ ಆಡಳಿತದಲ್ಲಿ ವೈಫಲ್ಯಗಳಿದ್ದರೆ ಆ ವಿಷಯವನ್ನು ಮಾತನಾಡುವ ಮೂಲಕ ರಾಜಕಾರಣ ಮಾಡಲಿ ಎಂದು ಅವರು ಹೇಳಿದರು.

‘ಲೋಕಸಭೆಯಲ್ಲಿ ನಮ್ಮ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೂದಲಿಸಿದ ಪ್ರಧಾನಿ ನರೇಂದ್ರ ಮೋದಿ, ಬಸವಣ್ಣನವರ ಅನುಭವ ಮಂಟಪವನ್ನು ಪ್ರಸ್ತಾಪಿಸಿದರು. ಬಸವಣ್ಣನವರ ವಿಚಾರಧಾರೆಗಳ ಬಗ್ಗೆ ಮಾತನಾಡುವ ಪ್ರಧಾನಿ 12ನೇ ಶತಮಾನದಲ್ಲಿಯೇ ಬಸವಣ್ಣನವರು ಪರಿಚಯಿಸಿದ್ದ ಸಮಾನತೆಯ ಸೂತ್ರವನ್ನು ಅನುಸರಿಸಲಿ ಎಂದು ಅವರು ತಿಳಿಸಿದರು.

ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ ಪ್ರಧಾನಿಯಾದವರು ದೇಶದ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಬೇಕು. ಆದರೆ, ಮೋದಿ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು ವೇದಿಕೆ ಬಳಸಿಕೊಂಡಿದ್ದು ಸೂಕ್ತವಲ್ಲ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.