ADVERTISEMENT

ಆಂಧ್ರಕ್ಕೆ ₹ 1,269 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಬಜೆಟ್ ಅನುದಾನ: ಮಿತ್ರಪಕ್ಷ ಟಿಡಿಪಿ ಪ್ರತಿಭಟನೆಗೆ ಮಣಿದ ಬಿಜೆಪಿ

ಪಿಟಿಐ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST
ಆಂಧ್ರಕ್ಕೆ ₹ 1,269 ಕೋಟಿ ಬಿಡುಗಡೆ ಮಾಡಿದ ಕೇಂದ್ರ
ಆಂಧ್ರಕ್ಕೆ ₹ 1,269 ಕೋಟಿ ಬಿಡುಗಡೆ ಮಾಡಿದ ಕೇಂದ್ರ   

ಅಮರಾವತಿ: ಕೇಂದ್ರ ಸರ್ಕಾರವು ಆಂಧ್ರಪ್ರದೇಶಕ್ಕೆ ಒಂದೇ ದಿನ ವಿವಿಧ ಯೋಜನೆಗಳ ಅಡಿ ₹1,269.5 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು  ತೆಲುಗುದೇಶಂ ಸಂಸದರು ನಡೆಸುತ್ತಿರುವ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಶನಿವಾರ ಅನುದಾನ ಬಿಡುಗಡೆ ಮಾಡಿದೆ.

ಪೊಲಾವರಂ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಕಾರಣ ಅದರ ಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಬೇಕು. ಯೋಜನೆಗೆ ರಾಜ್ಯ ಸರ್ಕಾರ ಮಾಡಿರುವ ವೆಚ್ಚವನ್ನು ಕೇಂದ್ರ ಸರ್ಕಾರ ನೀಡಬೇಕು ಎಂಬುದು ಆಡಳಿತಾರೂಢ ತೆಲುಗು ದೇಶಂ ಪಕ್ಷದ (ಟಿಡಿಪಿ) ಆಗ್ರಹವಾಗಿತ್ತು.

ADVERTISEMENT

ಯೋಜನೆಗೆ ಆಂಧ್ರಪ್ರದೇಶ ಸರ್ಕಾರ ಒಟ್ಟು ₹7,200 ಕೋಟಿ ವೆಚ್ಚಮಾಡಿದೆ. ಅದರಲ್ಲಿ ₹4,329 ಕೋಟಿಯನ್ನು ಕೇಂದ್ರ ಈಗಾಗಲೇ ಬಿಡುಗಡೆ ಮಾಡಿದೆ.

ಉಳಿದ ಹಣವನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿತ್ತು.

ಯಾವ ಯೋಜನೆಗೆ ಎಷ್ಟು ಹಣ

₹ 417.44 ಕೋಟಿ: ಪೊಲಾವರಂ ನೀರಾವರಿ ಯೋಜನೆ

₹ 369.16 ಕೋಟಿ: ಆಂಧ್ರಪ್ರದೇಶ ವಿಭಜನೆ ನಂತರದ

ಕಂದಾಯ ಕೊರತೆ ತುಂಬಿಕೊಳ್ಳಲು

₹ 253.74 ಕೋಟಿ: ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದ ‘ಮೂಲ ಅನುದಾನ’

₹ 196.90 ಕೋಟಿ: ಅಂಗನವಾಡಿ ಯೋಜನೆ

₹ 31.76 ಕೋಟಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

**

‘ಸ್ನೇಹದಿಂದ ಬಗೆಹರಿಸಿಕೊಳ್ಳಿ’

ನವದೆಹಲಿ: ‘ಆಂಧ್ರಪ್ರದೇಶದ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರ ಏನೂ ಮಾಡಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾವುದೇ ಸಮಸ್ಯೆಗಳಿದ್ದರೂ, ಟಿಡಿಪಿಯು ಅವುಗಳನ್ನು ಕೇಂದ್ರ ಸರ್ಕಾರದ ಜತೆ ಸ್ನೇಹಪೂರ್ವಕವಾಗಿ ಬಗೆಹರಿಸಿಕೊಳ್ಳಬೇಕು’ ಎಂದು ಬಿಜೆಪಿ ಹೇಳಿದೆ.

ಎನ್‌ಡಿಎ ಸರ್ಕಾರ ಆಂಧ್ರಪ್ರದೇಶಕ್ಕೆ ನೀಡಿರುವ ವಿವಿಧ ಯೋಜನೆಗಳು, ಬಿಡುಗಡೆ ಮಾಡಿರುವ ಅನುದಾನಗಳ ಮಾಹಿತಿ ಮತ್ತು ಆ ರಾಜ್ಯಕ್ಕೆ ನೀಡಿರುವ ವಿವಿಧ ಸಂಸ್ಥೆಗಳ ಪಟ್ಟಿಯನ್ನು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಖ್ತಾರ ಜಿ.ವಿ.ಎಲ್.ನರಸಿಂಹ ರಾವ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಹರಿ ಬಾಬು ಬಿಡುಗಡೆ ಮಾಡಿದರು.

‘ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್‌ ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುತ್ತಿವೆ. ಅಭಿವೃದ್ಧಿಯ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಆಂಧ್ರಪ್ರದೇಶಕ್ಕೆ ಯಾವಾಗಲೂ ಆದ್ಯತೆ ನೀಡಿದೆ. ರಾಜ್ಯದ ಅಭಿವೃದ್ಧಿಗೆ ಎನ್‌ಡಿಎ ಬದ್ಧವಾಗಿದೆ’ ಎಂದು ನರಸಿಂಹ ರಾವ್ ಹೇಳಿದರು.

**‌

ಮಲತಾಯಿ ಧೋರಣೆ’

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಅನುದಾನಗಳನ್ನು ನೀಡುವಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಆರೋಪಿಸಿದ್ದಾರೆ.

‘ಎನ್‌ಡಿಯೇತರ ಪಕ್ಷಗಳ ಸರ್ಕಾರಗಳಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಎನ್‌ಡಿಎ ತೆಳೆದಿರುವ ನಕಾರಾತ್ಮಕ ನಿಲುವೇ ಇದಕ್ಕೆ ಕಾರಣ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.