ADVERTISEMENT

ಆರ್ಥಿಕ ಸಂಕಷ್ಟ: ಸಿಪಿಎಂ ಕಚೇರಿ ₹15 ಸಾವಿರ ಭೋಗ್ಯಕ್ಕೆ

ಪಿಟಿಐ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರ್ದಮಾನ್‌: ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಿಪಿಎಂ, ಕಚೇರಿ ನಿರ್ವಹಣೆಗೆ ತಗಲುವ ವೆಚ್ಚವನ್ನು ಭರಿಸುವುದಕ್ಕಾಗಿ ಸ್ಥಳೀಯ ಘಟಕದ ಕಚೇರಿಯನ್ನು ತಿಂಗಳಿಗೆ ₹15 ಸಾವಿರಕ್ಕೆ ಭೋಗ್ಯಕ್ಕೆ ನೀಡಲು ನಿರ್ಧರಿಸಿದೆ.

‘ರಾಬಿನ್‌ ಸೇನ್‌ ಭವನ’ ಎಂಬ ಹೆಸರಿನಿಂದ ಕರೆಯುವ ಸಿಪಿಎಂ ಕಚೇರಿ 1999ರ ಮೇ 1ರಂದು ಉದ್ಘಾಟನೆಗೊಂಡಿತ್ತು. ಮೂರು ಅಂತಸ್ತುಗಳಿರುವ ಭವನದಲ್ಲಿ ಮೂರು ಕೋಣೆಗಳು, ಎರಡು ಸಭಾಂಣಗಳು, ಅಡುಗೆಕೋಣೆ ಹಾಗೂ ಶೌಚಾಲಯವಿದೆ.

‘ಭವನ ನಿರ್ಮಾಣಕ್ಕೆ ಹಣ ಸಂಗ್ರಹಿಸಿದ್ದ ಎಲ್ಲ 422 ಸದಸ್ಯರು ಬಾಡಿಗೆ ನೀಡುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಪಕ್ಷದ ಕಾರ್ಯದರ್ಶಿ ನಾರಾಯಣಚಂದ್ರ ಘೋಷ್‌ ತಿಳಿಸಿದ್ದಾರೆ.

ADVERTISEMENT

‘ಪಕ್ಷವು ಹಣಕಾಸು ಸಮಸ್ಯೆ ಎದುರಿಸುತ್ತಿದೆ. ಕಚೇರಿ ನಿರ್ವಹಣೆ, ವಿದ್ಯುತ್‌ ಶುಲ್ಕ ಪಾವತಿ, ಪಕ್ಷದ ಪೂರ್ಣಾವಧಿ ಕಾರ್ಯಕರ್ತರಿಗೆ ಸಂಬಳ ನೀಡಲು ಕಷ್ಟವಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ವಪನ್‌ ಪಾಲ್‌ ಎಂಬುವವರು ಕಚೇರಿ ಭೋಗ್ಯಕ್ಕೆ
ಪಡೆದಿದ್ದು, ಕೋಚಿಂಗ್‌ ಸೆಂಟರ್‌ ಆರಂಭಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಪಕ್ಷದ ನಿರ್ಧಾರಕ್ಕೆ ವಿರೋಧಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ‘ಸಿಪಿಎಂ ಜನ ಬೆಂಬಲವನ್ನು ಕಳೆದುಕೊಂಡಿದ್ದು, ಕಚೇರಿಯಲ್ಲಿ ಕೂರಿಸಲಿಕ್ಕೂ ಅವರ ಬಳಿ ಜನ ಇಲ್ಲ’ ಎಂದು ಟಿಎಂಸಿ ಸ್ಥಳೀಯ ನಾಯಕರು ವ್ಯಂಗ್ಯವಾಡಿದ್ದಾರೆ.

‘ಸಿಪಿಎಂ ಮುಂದೊಂದು ದಿನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.