ADVERTISEMENT

ರಜನಿ ‘ಕೇಸರಿ’ಯಾದರೆ ಮೈತ್ರಿ ಅಸಾಧ್ಯ: ಕಮಲ್‌

ಪಿಟಿಐ
Published 11 ಫೆಬ್ರುವರಿ 2018, 19:42 IST
Last Updated 11 ಫೆಬ್ರುವರಿ 2018, 19:42 IST
ರಜನಿಕಾಂತ್‌ ಹಾಗೂ ಕಮಲ್‌ ಹಾಸನ್‌(ಸಂಗ್ರಹ ಚಿತ್ರ).
ರಜನಿಕಾಂತ್‌ ಹಾಗೂ ಕಮಲ್‌ ಹಾಸನ್‌(ಸಂಗ್ರಹ ಚಿತ್ರ).   

ಕೇಂಬ್ರಿಡ್ಜ್‌ (ಮೆಸ್ಸಾಚುಸೆಟ್ಸ್‌): ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಬಣ್ಣ ಕೇಸರಿಯಾದರೆ ಅವರೊಂದಿಗೆ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಇತ್ತೀಚೆಗೆ ರಾಜಕಾರಣ ಪ್ರವೇಶಿಸಿರುವ ನಟ ಕಮಲ್‌ ಹಾಸನ್‌ ಹೇಳಿದ್ದಾರೆ. ರಜನಿಕಾಂತ್‌ ಅವರು ಬಿಜೆಪಿ ಕಡೆಗೆ ವಾಲಿದರೆ ಅವರ ಜತೆ ಸೇರುವುದಿಲ್ಲ ಎಂಬುದನ್ನು ಕಮಲ್‌ ಪರೋಕ್ಷವಾಗಿ ತಿಳಿಸಿದ್ದಾರೆ.

‘ಇಂದು ನಮ್ಮ ಮುಂದೆ ಇರುವ ನಿಜವಾದ ಗುರಿ ತಮಿಳುನಾಡನ್ನು ವ್ಯಾಪಿಸಿರುವ ಕಳಪೆ ರಾಜಕಾರಣವನ್ನು ಎದುರಿಸುವುದಾಗಿದೆ’ ಎಂದು ಅವರು ಹೇಳಿದ್ದಾರೆ.

ರಜನಿಕಾಂತ್‌ ಜತೆಗೆ ರಾಜಕೀಯ ಮೈತ್ರಿಯನ್ನು ಕಮಲ್‌ ತಳ್ಳಿ ಹಾಕಿಲ್ಲ. ತಮ್ಮಿಬ್ಬರ ಚಿಂತನೆಗಳು ಮತ್ತು ಪ್ರಣಾಳಿಕೆಯಲ್ಲಿ ಸಮಾನತೆ ಇದ್ದರೆ ಒಟ್ಟಾಗಿ ಚುನಾವಣೆಗೆ ಹೋಗಬಹುದು. ಆದರೆ ಧರ್ಮ ಮತ್ತು ‘ಕೇಸರಿ’ ವಿಚಾರಗಳಲ್ಲಿ ತಮ್ಮಿಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಇದೆ ಎಂದೂ ಅವರು ಹೇಳಿದ್ದಾರೆ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಭಾರತ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ಚುನಾವಣೋತ್ತರ ಮೈತ್ರಿ ಇಲ್ಲವೇ ಇಲ್ಲ ಎಂದೂ ಅವರು ತಿಳಿಸಿದ್ದಾರೆ.

‘ರಾಜಕಾರಣಿಗಳ ಜತೆಗೆ ಇರಬಾರದು, ಬದಲಿಗೆ ಜನರ ಜತೆಗೆ ಸಾಗಬೇಕು ಎಂಬ ಕಾರಣಕ್ಕಾಗಿಯೇ ನಾನು ಹೊಸ ಪಕ್ಷ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ತಮಿಳುನಾಡಿನ ರಾಜಕೀಯ ವರ್ಗದ ಮೇಲೆ ಹರಿಹಾಯ್ದಿರುವ ಕಮಲ್‌, ‘ಇಲ್ಲಿ ಯಾವುದೂ ಸರಿ ಇಲ್ಲ’ ಎಂದಿದ್ದಾರೆ.

‘ಲವ್‌ ಜಿಹಾದ್‌’ ಬಗ್ಗೆ ಮಾತನಾಡಿದ ಅವರು, ‘ಹೊಸದೊಂದು ಕ್ರಾಂತಿ ಸನ್ನಿಹಿತವಾಗಿದೆ. ಜಿಹಾದ್‌ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ದ್ವೇಷದ ವಿರುದ್ಧ ಪ್ರೀತಿ ಜಯ ಸಾಧಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.