ADVERTISEMENT

ಅನುರಾಗ್‌ ಸಾವು: ಸಾಕ್ಷಿ, ಸಾಕ್ಷ್ಯಗಳ ಮರುಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST

ಲಖನೌ: ಕರ್ನಾಟಕದ ಐಎಎಸ್‌ ಅಧಿಕಾರಿಯಾಗಿದ್ದ ಅನುರಾಗ್‌ ತಿವಾರಿ ಸಾವಿನ ನಿಗೂಢವನ್ನು ಕಂಡು ಹಿಡಿಯುವ ಪ್ರಯತ್ನ ಮುಂದುವರಿದಿದೆ. ಸಾಕ್ಷ್ಯಗಳನ್ನು ಮರುಪರಿಶೀಲಿಸಲು ಸಿಬಿಐ ಆರಂಭಿಸಿದೆ. ಹಾಗೆಯೇ ಸಾಕ್ಷಿಗಳನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಅನುರಾಗ್‌ ಅವರ ಗೆಳೆಯ ಮತ್ತು ಲಖನೌ ಅಭಿವೃದ್ಧಿ ಪ್ರಾಧಿಕಾರದ (ಎಲ್‌ಡಿಎ) ಉಪಾಧ್ಯಕ್ಷ ಪಿ.ಎನ್‌.ಸಿಂಗ್‌ ಅವರನ್ನು ಮತ್ತೆ ವಿಚಾರಣೆ ನಡೆಸಲಾಗಿದೆ. ಅನುರಾಗ್‌ ಸಾವಿಗೆ ಮೊದಲು ಏನೇನು ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಇತರ ಕೆಲವರನ್ನೂ ವಿಚಾರಣೆ ಮಾಡಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸಿಂಗ್‌ ಅವರ ಜತೆ ಅನುರಾಗ್‌ ತಂಗಿದ್ದ ಕೊಠಡಿಗೆ ಸಿಬಿಐ ತಂಡ ಮಂಗಳವಾರ ಭೇಟಿಕೊಟ್ಟಿದೆ. ಸಾಕ್ಷಿಗಳು ಮತ್ತು ಇತರರ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕೆಲಸವೂ ನಡೆಯುತ್ತಿದೆ.

ADVERTISEMENT

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್‌ ಅವರ ಮೃತದೇಹ ಕಳೆದ ಮೇ 17ರಂದು ಲಖನೌನ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣ ಏನು ಎಂಬುದು ತಿಳಿದಿರಲಿಲ್ಲ. ಅನುರಾಗ್‌ ಅವರ ಒಳಾಂಗಗಳ ಪರೀಕ್ಷೆಯಲ್ಲಿಯೂ ಮಹತ್ವದ ಸುಳಿವು ಸಿಕ್ಕಿರಲಿಲ್ಲ.

ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಬಹುದು ಎಂಬ ಭಯದಲ್ಲಿ ಹಿರಿಯ ಅಧಿಕಾರಿಗಳೇ ಈ ಹತ್ಯೆ ಮಾಡಿಸಿದ್ದಾರೆ ಎಂದು ಅನುರಾಗ್‌ ಕುಟುಂಬದ ಸದಸ್ಯರು ಆರೋಪಿಸಿದ್ದರು. ಅತಿಯಾದ ಔಷಧ ಸೇವನೆ ಸಾವಿನ ಕಾರಣ ಆಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು.

ಕಳೆದ ಜೂನ್‌ನಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ತಂಡ ಬೆಂಗಳೂರಿಗೂ ಭೇಟಿ ನೀಡಿತ್ತು. ಅನುರಾಗ್‌ ಕೆಲಸ ಮಾಡುತ್ತಿದ್ದ ಇಲಾಖೆಯ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಬಳಿಕ, ಅವರ ಹುಟ್ಟೂರು ಉತ್ತರ ಪ್ರದೇಶದ ಬಹರೈಚ್‌ನಲ್ಲಿ ತನಿಖೆ ನಡೆಸಿತ್ತು. ಆದರೆ ಈತನಕ ಯಾವುದೇ ಸುಳಿವು ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.