ADVERTISEMENT

6 ಜಿಲ್ಲೆಗೆ ವಿಶೇಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ನವದೆಹಲಿ: ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ತಂದು ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟದ ರಾಜಕೀಯ ಸಮಿತಿ ಶುಕ್ರವಾರ ಒಪ್ಪಿಗೆ ನೀಡಿತು. ಇದರೊಂದಿಗೆ ಈ ಭಾಗದ ಆರು ಜಿಲ್ಲೆಗಳ ಜನರ ಎರಡು ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ.

ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಜನರಿಗೆ ತಿದ್ದುಪಡಿ ಮಸೂದೆ ಪ್ರಸ್ತಾವವು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪ್ರತ್ಯೇಕ ಮೀಸಲಾತಿ ಸೌಲಭ್ಯ ಒದಗಿಸಲಿದೆ.

ಮಸೂದೆ ಜಾರಿಗೆ ಬಂದ ಬಳಿಕ ರಾಜ್ಯ ಸರ್ಕಾರ ಈ ಸಂಬಂಧ ಪ್ರತ್ಯೇಕ ನಿಯಮಾವಳಿ ರೂಪಿಸಬೇಕಾದ ಅಗತ್ಯವಿದೆ. ಅಲ್ಲದೆ, ಮಸೂದೆ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಅವಕಾಶ ಕಲ್ಪಿಸಲಿದೆ.

ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ 371ನೇ ಕಲಮಿಗೆ ತರಲು ಹೊರಟಿರುವ ತಿದ್ದುಪಡಿ ಮಸೂದೆ ಮಹಾರಾಷ್ಟ್ರದ ವಿದರ್ಭ ಹಾಗೂ ಆಂಧ್ರದ ತೆಲಂಗಾಣಕ್ಕಿಂತ ಉತ್ತಮವಾದ ಅಂಶಗಳನ್ನು ಒಳಗೊಂಡಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ. ರಾಜಕೀಯ ವ್ಯವಹಾರ ಸಮಿತಿ ಒಪ್ಪಿಗೆ ಪಡೆದಿರುವ ಸಂವಿಧಾನ ತಿದ್ದುಪಡಿ ಪ್ರಸ್ತಾವ ಸದ್ಯದಲ್ಲೇ ಸಚಿವ ಸಂಪುಟದ ಒಪ್ಪಿಗೆಗಾಗಿ ಹೋಗಲಿದೆ. ಅನಂತರ ಸಂಸತ್ತಿನಲ್ಲಿ ಮಂಡನೆಯಾಗಲಿದೆ.
 

ಹೋರಾಟಕ್ಕೆ ಸಿಕ್ಕ ಗೆಲುವು
ಇದು ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಸಿಕ್ಕ ಗೆಲುವು. ಹಲವು ವರ್ಷಗಳಿಂದಲೂ ಅನೇಕ ಸಂಘಟನೆಗಳು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿ, 371ನೇ ಕಲಂ ತಿದ್ದುಪಡಿಗೆ ಮುಂದಾಗಿರುವುದು ಜನರಲ್ಲಿ ಹರ್ಷ ಮೂಡಿಸಿದೆ. ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಈ ಭಾಗದ ಜನತೆಗೆ ವಿಶೇಷ ಮೀಸಲಾತಿ ಸಿಗಲಿದೆ~
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ 
ಕೇಂದ್ರದ ಕ್ರಮ ಸ್ವಾಗತಾರ್ಹ
ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಎಲ್ಲ ರಾಜಕೀಯ ಪಕ್ಷಗಳೂ ಸ್ವಾಗತಿಸಬೇಕು. ಆ ಪ್ರದೇಶ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಹೆಚ್ಚು ಶ್ರಮ ವಹಿಸಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅದನ್ನು ಮಾನ್ಯ ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡ ಈ ಪ್ರದೇಶದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು~.
- ಡಾ.ಜಿ.ಪರಮೇಶ್ವರ,
ಕೆಪಿಸಿಸಿ ಅಧ್ಯಕ್ಷ


ಇದು ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಉಭಯ ಸದನಗಳ 2/3ರಷ್ಟು ಬಹುಮತದ ಅಗತ್ಯವಿದೆ. ಆದರೆ, ಹೈದರಾಬಾದ್-ಕರ್ನಾಟಕದ ವಿಶೇಷ ಸ್ಥಾನಮಾನಕ್ಕೆ ಎರಡು ದಶಕಗಳಿಂದ ಪಕ್ಷಾತೀತವಾಗಿ ಹೋರಾಟ ನಡೆದಿದ್ದು ಎಲ್ಲ ರಾಜಕೀಯ ಪಕ್ಷಗಳು ಚಳವಳಿಗೆ ಬೆಂಬಲ ವ್ಯಕ್ತಪಡಿಸಿವೆ.

ಅನೇಕ ಸಲ ಸರ್ವಪಕ್ಷಗಳ ನಿಯೋಗ ದೆಹಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಸೂದೆ ಯಾವುದೇ ವಿರೋಧವೂ ಇಲ್ಲದೆ ಸರ್ವಾನುಮತದಿಂದ ಅಂಗೀಕಾರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಅತಿ ಹಿಂದುಳಿದಿರುವ ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವಾಲಯ ರಾಜಕೀಯ ವ್ಯವಹಾರಗಳ ಸಮಿತಿ ಮುಂದೆ ಮಂಡಿಸಿತು. ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕರ್ನಾಟಕ ಹಲವು ವರ್ಷಗಳಿಂದ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಹಿಂದಿನ ಎನ್‌ಡಿಎ ಸರ್ಕಾರ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT