ADVERTISEMENT

ಕಾಶ್ಮೀರದಲ್ಲಿ ಪ್ರತ್ಯೇಕ ಎನ್‌ಕೌಂಟರ್‌- 6 ಜೆಇಎಂ ಉಗ್ರರ ಹತ್ಯೆ, ಯೋಧ ಹುತಾತ್ಮ

ಯೋಧರೊಬ್ಬರು ಹುತಾತ್ಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 14:39 IST
Last Updated 30 ಡಿಸೆಂಬರ್ 2021, 14:39 IST
   

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್‌ ಹಾಗೂ ಕುಲ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಇಬ್ಬರು ಸೇರಿ ಜೈಶೆ–ಮೊಹಮ್ಮದ್‌ (ಜೆಇಎಂ) ಸಂಘಟನೆಯ ಆರು ಉಗ್ರರು ಹತ್ಯೆಯಾಗಿಯಾಗಿದ್ದಾರೆ. ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಅನಂತನಾಗ್‌ ಜಿಲ್ಲೆಯ ನೌಗಮ್‌ ಹಾಗೂ ಕುಲ್ಗಾಮ್‌ ಜಿಲ್ಲೆಯ ಮಿರ್ಹಾಮ ಗ್ರಾಮದಲ್ಲಿ ಬುಧವಾರ ತಡರಾತ್ರಿ ಹಾಗೂ ಗುರುವಾರ ನುಸುಕಿನ ವೇಳೆ ಅರೆಸೇನಾಪಡೆ, ಸೇನೆ ಹಾಗೂ ಪೊಲೀಸರು ನಡೆಸಿದ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯಲ್ಲಿ ಉಗ್ರರು ಬಲಿಯಾಗಿದ್ದಾರೆ.

‘ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಆರು ಮಂದಿ ಜೆಇಎಂ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಪಾಕಿಸ್ತಾನಿಗಳು, ಇಬ್ಬರು ಸ್ಥಳೀಯ ಉಗ್ರರಾಗಿದ್ದು, ಮತ್ತಿಬ್ಬರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಇದು ನಮಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಎರಡೂ ಪ್ರದೇಶಗಳಲ್ಲೂ ಸ್ಥಳೀಯ ಪೊಲೀಸ್‌, ಸೇನೆ ಹಾಗೂ ಅರೆಸೇನಾ ಪಡೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಉಗ್ರರು ಅಪ್ರಚೋದಿತ ಗುಂಡಿನ ಸುರಿಮಳೆಗೈದರು. ಈ ವೇಳೆ ಭದ್ರತೆ ಪಡೆಗಳು ನಡೆಸಿದ ಪ್ರತಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌, ಇಬ್ಬರು ಯೋಧರು ಗಾಯಗೊಂಡಿದ್ದರು.ತೀವ್ರವಾಗಿ ಗಾಯಗೊಂಡಿದ್ದ ಯೋಧರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕುಲ್ಗಾಮ್‌ ಜಿಲ್ಲೆಯ ಮಿರ್ಹಾಮ ಗ್ರಾಮದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ. ಹತ್ಯೆಯಾದವರನ್ನು ಮೊಹಮ್ಮದ್‌ ಶಫಿ ದಾರ್‌, ಉಜೈರ್‌ ಅಹ್ಮದ್‌, ಶಾಹಿದ್‌ ಅಲಿಯಾಸ್‌ ಶಹಜೈದ್‌ ಎಂದು ಗುರುತಿಸಲಾಗಿದ್ದು, ಶಾಹಿದ್‌ ಪಾಕಿಸ್ತಾನದ ಉಗ್ರನಾಗಿದ್ದು, ಉಳಿದ ಇಬ್ಬರು ಸ್ಥಳೀಯರಾಗಿದ್ದಾರೆ.ಹತ್ಯೆಯಾದವರಿಂದ ಎಂ4, ಎಕೆ ಮಾದರಿಯ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

‘ಬದಲಾಗುತ್ತಿರುವ ಹವಾಮಾನ ಹಾಗೂ ಹಿಮ ಸುರಿಯುತ್ತಿರುವುದು ಕಣಿವೆಯಲ್ಲಿ ಗುಂಡಿನ ಚಕಮಕಿ ಹೆಚ್ಚಾಗಲು ಪ್ರಮುಖ ಕಾರಣ. ಸಾಮಾನ್ಯವಾಗಿ ಈ ಸಮಯದಲ್ಲಿ ಉಗ್ರರು ತಮ್ಮ ವಾಸ ಸ್ಥಾನವನ್ನು ಬದಲಿಸುತ್ತಿದ್ದು, ಗ್ರಾಮಗಳತ್ತ ಹಿಂತಿರುಗುತ್ತಿದ್ದಾರೆ. ಹಾಗಾಗಿ ಮಾಹಿತಿ ಮೇರೆಗೆ ದಾಳಿ ನಡೆಸಲಾಗುತ್ತಿದೆ. ಚಳಿಗಾಲದಲ್ಲಿ ಗುಂಡಿನ ದಾಳಿ ಹೆಚ್ಚಾಗಲಾಗಲು ಇದು ಮುಖ್ಯ ಕಾರಣ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ದಕ್ಷಿಣ ಕಾಶ್ಮೀರದಲ್ಲಿ ಕಳೆದ ಒಂದು ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 11 ಉಗ್ರರು ಹತರಾಗಿದ್ದಾರೆ. ಡಿ.26ರಂದು ಶೋಪಿಯಾನ್‌, ಪುಲ್ವಾಮ ಹಾಗೂ ಅನಂತನಾಗ್‌ ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಐವರು ಉಗ್ರರು ಹತ್ಯೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.