ADVERTISEMENT

85 ಮಂದಿ ವಿರುದ್ಧ ದೂರು ದಾಖಲು

ಮುಜಫ್ಫರ್‌ನಗರ ಕೋಮುಗಲಭೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ಮುಜಫ್ಫರ್‌ನಗರ (ಪಿಟಿಐ): ಮುಜಫ್ಫರ್‌ನಗರದ  ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇಲ್ಲಿನ ಖಾಪ್‌ (ಜಾತಿ) ಪಂಚಾಯಿತಿ ಮುಖಂಡ ಹಾಗೂ ಆತನ ಮಕ್ಕಳಿಬ್ಬರು ಸೇರಿದಂತೆ ಮತ್ತೆ 85 ಜನರ ವಿರುದ್ಧ ಶನಿವಾರ ದೂರು ದಾಖಲಾಗಿದೆ.

ಘಟನಾ ವೇಳೆ ಕಿಡಿಗೇಡಿಗಳು ಇಲ್ಲಿನ ಫಗನಾ ಪ್ರದೇಶದ ಲಿಸಾಧ್‌ ಗ್ರಾಮದ ಕೆಲ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ  ಎಂದು  ಗ್ರಾಮಸ್ಥರು ಶನಿವಾರ ನೀಡಿದ ದೂರಿನ ಹಿನ್ನೆಲೆಯಲ್ಲಿ  ಖಾಪ್ ಪಂಚಾಯಿತಿ ಮುಖಂಡ ಬಾಬಾ ಹರಿಕೃಷ್ಣನ್‌ ಸಿಂಗ್‌ ಹಾಗೂ ಆತನ ಇಬ್ಬರು ಮಕ್ಕಳನ್ನು ಭಾರತೀಯ ದಂಡ ಸಂಹಿತೆ 153 ಎ (ಎರಡು ಗುಂಪುಗಳ ನಡುವೆ ಹಗೆತನ ಸೃಷ್ಟಿ) 395 (ಡಕಾಯಿತಿ), 436 (ಬೆಂಕಿ ಅಥವಾ ಇತರೆ ಸ್ಫೋಟಕ ದಿಂದ ಮನೆ ಅಥವಾ ಇತರೆ ಆಸ್ತಿಪಾಸ್ತಿಗಳಿಗೆ ಹಾನಿ ) ಅನ್ವಯ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಧುಗಳ ಯಾತ್ರೆಗೆ ಮಾತ್ರ ಅನುಮತಿ
ಲಖನೌ:  ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ಹಿನ್ನೆಲೆಯಲ್ಲಿ ಸರ್ಕಾರ  ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ಪ್ರಾಯೋಜಿತ ‘ಪಂಚಕೋಸಿ ಪರಿಕ್ರಮ’ ಯಾತ್ರೆಯ ಮೇಲೆ ನಿಷೇಧ ಹೇರಿದೆ.

ಅಯೋಧ್ಯೆಯ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಸೋಮವಾರದಿಂದ  ವಿಎಚ್‌ಪಿಯ ‘ಪಂಚಕೋಸಿ ಪರಿಕ್ರಮ’ ಯಾತ್ರೆ  ಆರಂಭವಾಗಬೇಕಿತ್ತು.

ಕೇವಲ ಸಾಧು ಮತ್ತು ಸನ್ಯಾಸಿಗಳ ಯಾತ್ರೆಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಅಯೋಧ್ಯೆ ಇರುವ ಫೈಜಾಬಾದ್‌ ಜಿಲ್ಲೆಯಲ್ಲಿ ಅಕ್ಟೋಬರ್‌ 30ರವರೆಗೆ ಈ ನಿಷೇಧ ಹೇರಲಾಗಿದೆ.

‘ಪರಿಕ್ರಮ ಯಾತ್ರೆ ಕೈಗೊಳ್ಳುವ ಸಾಧು ಹಾಗೂ ಸನ್ಯಾಸಿಗಳಿಗೆ ತಡೆ ಒಡ್ಡು ವುದಿಲ್ಲ. ಆದರೆ ವಿಎಚ್‌ಪಿ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾವುದಿಲ್ಲ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಯೋಧ್ಯೆಯ  ವಿಎಚ್‌ಪಿ ಕಚೇರಿ ಕರಸೇವಕಪುರಂನಲ್ಲಿ ಯಜ್ಞ, ಯಾಗಾದಿ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು  ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.