ADVERTISEMENT

ಲೋಕಸಭಾ ಚುನಾವಣೆ: ಒಡಿಶಾದ ಪುರಿಯಿಂದ ಮೋದಿ ಸ್ಪರ್ಧೆ?

ಏಜೆನ್ಸೀಸ್
Published 3 ಜನವರಿ 2019, 10:53 IST
Last Updated 3 ಜನವರಿ 2019, 10:53 IST
   

ಭುವನೇಶ್ವರ:ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದ್ದು, ಚರ್ಚೆಗಳು ಆಗುತ್ತಿವೆ. ಮೋದಿ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಶಾಸಕ ಊಹಾಪೋಹದ ಹೇಳಿಕೆ ನೀಡಿದ್ದಾರೆ.

‘2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುರಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಶೇಕಡಾ 90ರಷ್ಟಿದೆ’ ಎಂದು ಒಡಿಶಾದ ಪದಂಪುರದ ಶಾಸಕ ಪ್ರದೀಪ್‌ ಪುರೋಹಿತ್‌ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಸ್ಪರ್ಧಿಸುವುದು ಜನರ ಬಯಕೆಯೂ ಆಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕಳೆದ ಚುನಾವಣೆಯಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರು ಆಯ್ಕೆಯಾದ ಬಳಿಕ ಪುರಿಯಿಂದ ಪ್ರಥಮ ರಾಜಕೀಯ ಪ್ರಚಾರ ಆರಂಭಿಸಿದ್ದರು. ಯಶಸ್ಸು ಗಳಿಸುವ ಮೂಲಕ ಪ್ರಧಾನಿಯಾದ ಬಳಿಕ ಅವರು, ಪವಿತ್ರ ಕ್ಷೇತ್ರ ಪುರಿಗೆ ಬಂದು ಜಗನ್ನಾಥನ ದರ್ಶನ ಆಶೀರ್ವಾದ ಪಡೆದರು ಎಂದು ಅವರು ತಿಳಿಸಿದ್ದಾರೆ.

ಒಡಿಶಾದಲ್ಲಿ ರೈಲ್ವೆ ಕ್ಷೇತ್ರ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಮೋದಿ ಅವರು ಹೆಚ್ಚಿನ ಗಮನ ನೀಡಿದ್ದಾರೆ ಮತ್ತು ರಾಜ್ಯವು ಕಾರ್ಯಸೂಚಿಯ ಒಂದು ಭಾಗವೂ ಆಗಿದೆ ಎಂದು ಪುರೋಹಿತ್‌ ಹೇಳಿದ್ದಾರೆ.

ನರೇಂದ್ರ ಮೊದಿ ಅವರು ಇಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು ಎಂದು ಹೇಳಿರುವ ಪುರೋಹಿತ್‌, ಕಳೆದ ಚುನಾವಣೆಯಲ್ಲಿ ಮೋದಿ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾದ ವಾರಣಾಸಿಯಿಂದ ಸ್ಪರ್ಧಿಸಿದ್ದರು. ಪುರಿ ಸಹ ಒಂದು ಪ್ರಮುಖ ಯಾತ್ರಾ ಸ್ಥಳ. ಮೋದಿ ಪುರಿಯನ್ನು ಪ್ರೀತಿಸುತ್ತಾರೆ. ಅವರು ಇಲ್ಲಿ ಸ್ಪರ್ಧಿಸುವ ಬಗ್ಗೆ ಶೇ 90ರಷ್ಟು ಸಾಧ್ಯತೆಗಳಿವೆ ಎಂದು ನಾನು ಹೇಳಬಯಸುತ್ತೇನೆ ಎಂದಿದ್ದಾರೆ.

ನರೇಂದ್ರ ಮೋದಿ ಅವರು ಎಲ್ಲಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಪಕ್ಷದ ಸಂಸದೀಯ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಪುರೋಹಿತ್‌ ಅವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ಮತ್ತು ಬಿಜೆಡಿ ಉಪಾಧ್ಯಕ್ಷ ಪ್ರಸನ್ನ ಆಚಾರ್ಯ, ‘ಒಡಿಶಾದಲ್ಲಿ ಆಡಳಿತ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದ್ದಾರೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು, ಯಾರು ಎಲ್ಲಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಪ್ರಧಾನಿ ಮೋದಿ ಅವರು ತಮ್ಮ ಕ್ಷೇತ್ರವನ್ನು ಬಿಟ್ಟು ಒಡಿಶಾದಿಂದ ಸ್ಪರ್ಧಿಸಿದರೆ ಅದರ ಬಗ್ಗೆ ನಾವು ಹೇಳಲು ಏನ್ನೂ ಇಲ್ಲ ಎಂದು ಆಚಾರ್ಯ ತಿಳಿಸಿದ್ದಾರೆ.

‘ಮೋದಿ ಅವರು ಭಾರತದ ಪ್ರಧಾನಿಯಾಗಿದ್ದಾರೆ ಮತ್ತು 2019ರ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಅವರ ಪಕ್ಷ(ಬಿಜೆಪಿ) ನಿರ್ಧರಿಸುತ್ತದೆ. ನಾವು ಹೇಳಲು ಏನೂ ಇಲ್ಲ. ಮಿಷನ್‌ 120+ ಗುರಿಯೊಂದಿಗೆ ಒಡಿಶಾದ ಪುರಿಯಿಂದ ಹೋರಾಡುವುದಾದರೆ ಅದು ಅವರ ನಿರ್ಧಾರ. ಚುನಾವಣೆಯಲ್ಲಿ ಬಿಜೆಡಿ ಅಭಿವೃದ್ಧಿ ಮತ್ತು 2014ರಲ್ಲಿ ನೀಡಿದ್ದ ಭರವಸೆಗಳನ್ನು ಪೂರ್ಣಗೊಳಿಸಿದ್ದರ ಆಧಾರದ ಮೇಲೆ ಸ್ಪರ್ಧಿಸಲಿದೆ. ಅದೇ ವಿಷಯಗಳನ್ನು ಇಟ್ಟುಕೊಂಡು ಬಿಜೆಡಿ 2019ರ ಚುನಾವಣೆಗೆ ಹೋಗುತ್ತದೆ’ ಎಂದು ಬಿಜೆಡಿ ವಕ್ತಾರ ಸಮೀರ್‌ ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.