ADVERTISEMENT

44 ವರ್ಷಗಳ ಹಿಂದಿನ ಘಟನೆ; 24 ದಲಿತರ ಹತ್ಯೆಗೈದವರಲ್ಲಿ ಬದುಕಿರುವ ಮೂವರಿಗೆ ಗಲ್ಲು

ಪಿಟಿಐ
Published 18 ಮಾರ್ಚ್ 2025, 12:07 IST
Last Updated 18 ಮಾರ್ಚ್ 2025, 12:07 IST
<div class="paragraphs"><p> ಮರಣದಂಡನೆ (ಪ್ರಾತಿನಿಧಿಕ ಚಿತ್ರ)</p></div>

ಮರಣದಂಡನೆ (ಪ್ರಾತಿನಿಧಿಕ ಚಿತ್ರ)

   

ಮೈನ್‌ಪುರಿ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ದಿಹುಲಿ ಗ್ರಾಮದಲ್ಲಿ 44 ವರ್ಷಗಳ ಹಿಂದೆ ನಡೆದಿದ್ದ 24 ದಲಿತರ ಹತ್ಯಾಕಾಂಡದಲ್ಲಿ ಡಕಾಯಿತರ ತಂಡದ ಮೂವರನ್ನು ಅಪರಾಧಿಗಳು ಎಂದು ಘೋಷಿಸಿದ ಸ್ಥಳೀಯ ನ್ಯಾಯಾಲಯ, ಗಲ್ಲು ಶಿಕ್ಷೆಯನ್ನು ಮಂಗಳವಾರ ಪ್ರಕಟಿಸಿದೆ.

‘ಕಪ್ತಾನ್‌ ಸಿಂಗ್‌, ರಾಮ್‌ ಪಾಲ್‌ ಮತ್ತು ರಾಮ್‌ ಸೇವಕ್‌ ಎಂಬುವವರು ದಿಹುಲಿ ದಲಿತ್‌ ಹತ್ಯಾಕಾಂಡದ ಅಪರಾಧಿಗಳಾಗಿದ್ದು, ಇವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳಿಗೆ ತಲಾ ₹50 ಸಾವಿರ ದಂಡ ಭರಿಸಬೇಕು’ ಎಂದು ವಿಶೇಷ ನ್ಯಾಯಾಧೀಶೆ ಇಂದಿರಾ ಸಿಂಗ್‌ ಘೋಷಿಸಿದರು’ ಎಂದು ಸರ್ಕಾರಿ ಅಭಿಯೋಜಕ ಪುಷ್ಪೇಂದ್ರ ಸಿಂಗ್ ಚವ್ಹಾಣ್ ತಿಳಿಸಿದ್ದಾರೆ.

ADVERTISEMENT

1981ರ ನ. 18ರಂದು ನಡೆದ ಈ ಹತ್ಯಾಕಾಂಡದಲ್ಲಿ ಸಂತೋಷ್ ಸಿಂಗ್‌ ಎಂಬ ಡಕಾಯಿತರ ಗುಂಪಿನ ನಾಯಕನ ಆಜ್ಞೆಯಂತೆ ರಾಧೇ ಶ್ಯಾಮ್‌ ಎಂಬಾತ ದಿಹುಲಿ ಗ್ರಾಮದ ದಲಿತ ಸಮುದಾಯದ ಮೇಲೆ ದಾಳಿ ಮಾಡಿದ್ದ. ಗುಂಡಿನ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ 24 ಜನ ಮೃತಪಟ್ಟಿದ್ದರು. ನಂತರ ಅವರ ಬಳಿ ಇದ್ದ ವಸ್ತುಗಳನ್ನು ದೋಚಿದ್ದರು. ಈ ಕುರಿತು ಜಸರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಡಕಾಯಿತರ ತಂಡದ ಮುಖಂಡ ಸಂತೋಷ್‌ ಮತ್ತು ರಾಧೇ ಒಳಗೊಂಡು 17 ಜನರ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ 17 ಆರೋಪಿಗಳಲ್ಲಿ ಸಂತೋಷ್ ಮತ್ತು ರಾಧೇ ಸೇರಿ 13 ಜನ ಮೃತಪಟ್ಟಿದ್ದಾರೆ. ಬದುಕುಳಿದಿರುವ ನಾಲ್ವರಲ್ಲಿ 40 ವರ್ಷಗಳ ಬಳಿಕವೂ ಒಬ್ಬ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ವಿಚಾರಣೆ ಎದುರಿಸಿದ್ದರು.

ಬದುಕುಳಿದ ಮೂವರನ್ನು ಅಪರಾಧಿಗಳು ಎಂದು ಮಾರ್ಚ್ 12ರಂದು ನ್ಯಾಯಾಲಯ ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದು (ಮಂಗಳವಾರ) ಪ್ರಕಟಿಸಿದೆ.

ಈ ಘಟನೆ ನಡೆದ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹತ್ಯಾಕಾಂಡ ಖಂಡಿಸಿ ದಿಹುಲಿಯಿಂದ ಫಿರೋಝಾಬಾದ್‌ನ ಸಾದುಪುರ್‌ವರೆಗೆ ಪಾದಯಾತ್ರೆ ಕೈಗೊಂಡಿದ್ದರು.

ಈ ಪ್ರಕರಣವು ಫಿರೋಜಾಬಾದ್‌ ಜಿಲ್ಲೆಯಲ್ಲಿ ನಡೆದಿತ್ತು. ಅಲಹಾಬಾದ್‌ ಹೈಕೋರ್ಟ್‌ ಸೂಚನೆಯಂತೆ, ಪ್ರಕರಣವನ್ನು ಮೈನ್‌ಪುರಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು.

‘ಕೊನೆಗೂ ನ್ಯಾಯ ಸಿಕ್ಕಿದೆ’ ಎಂದು ದಿಹುಲಿ ಗ್ರಾಮದ ಸಂತ್ರಸ್ತರು ತಿಳಿಸಿದ್ದಾರೆ. 

ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು 30 ದಿನಗಳ ಕಾಲಾವಕಾಶವಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.