ನವದೆಹಲಿ: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ತತ್ವಜ್ಞಾನಿ ಮತ್ತು ಲೇಖಕ ಆಚಾರ್ಯ ಪ್ರಶಾಂತ್ ಅವರಿಗೆ ಪ್ರತಿಷ್ಠಿತ 'ಅತ್ಯಂತ ಪ್ರಭಾವಶಾಲಿ ಪರಿಸರವಾದಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗ್ರೀನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಆಧ್ಯಾತ್ಮಿಕ ಸ್ಪಷ್ಟತೆಯನ್ನು ಪರಿಸರ ಜಾಗೃತಿಯೊಂದಿಗೆ ಸಂಯೋಜಿಸುವಲ್ಲಿ ಮತ್ತು ಲಕ್ಷಾಂತರ ಜನರಿಗೆ ಸುಸ್ಥಿರ ಜೀವನ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವಲ್ಲಿ ಅವರ ವಿಶಿಷ್ಟ ಕೊಡುಗೆಗಾಗಿ ಸಂಸ್ಥೆ ಆಚಾರ್ಯ ಪ್ರಶಾಂತ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
‘ಹವಾಮಾನ ಬಿಕ್ಕಟ್ಟು ಕೇವಲ ಹೊರಗೆ ಅಲ್ಲ, ಅದು ನಮ್ಮ ಒಳಗೇ ಇದೆ. ನಮ್ಮ ಮನಸ್ಸುಗಳು ದುರಾಸೆಯಿಂದ ಉರಿಯುತ್ತಿರುವುದರಿಂದ ಹಿಮ ಕರಗುತ್ತಿದೆ. ನಮ್ಮ ಆಸೆಗಳಿಗೆ ಯಾವುದೇ ಮಿತಿಯಿಲ್ಲದ ಕಾರಣ ಸಾಗರಗಳು ಉಕ್ಕುತ್ತಿವೆ. ನಾವು ಜವಾಬ್ದಾರಿಯುತವಾಗಿ ವರ್ತಿಸುವ ಮೊದಲು, ನಾವು ಸ್ಪಷ್ಟವಾಗಿ ಯೋಚಿಸಬೇಕು. ನಿಜವಾದ ಪರಿಸರವಾದವು ನೀತಿಯಲ್ಲಿ ಅಲ್ಲ, ನಮ್ಮ ಪ್ರಜ್ಞೆಯಿಂದ ಆರಂಭವಾಗುತ್ತದೆ’ಎಂದು ಆಚಾರ್ಯ ಪ್ರಶಾಂತ್ ಗ್ರೇಟರ್ ನೋಯ್ಡಾದಲ್ಲಿ ನಡೆದ 2025ರ ವಿಶ್ವ ಪರಿಸರ ಸಮ್ಮೇಳನದಲ್ಲಿ ಹೇಳಿದ್ದಾರೆ.
ಬೆಳೆಯುತ್ತಿರುವ ಹವಾಮಾನ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಅವರು ಭಾರತದ ಯುವಕರನ್ನು ಜಾಗೃತಗೊಳಿಸಲು ಮತ್ತು ಅರಿವು ಮೂಡಿಡಲು ರಾಷ್ಟ್ರವ್ಯಾಪಿ ಉಪಕ್ರಮವಾದ ‘ಆಪರೇಷನ್ 2030’ ಅನ್ನು ಆರಂಭಿಸಿದ್ದಾರೆ.
ನಾವು ಈಗಾಗಲೇ ಬಹಳಷ್ಟು ಸಮಯ ಕಳೆದಿದ್ದೇವೆ. ಈಗ ಆಂತರಿಕ ಕ್ರಾಂತಿಯಾಗಬೇಕಿದೆ. ಪರಿಸರದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಅದ್ವೈತ ಪ್ರತಿಷ್ಠಾನದ ಸಂಸ್ಥಾಪಕರಾದ ಆಚಾರ್ಯ ಪ್ರಶಾಂತ್ 160ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆಂತರಿಕ ಪರಿವರ್ತನೆಯನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಂಯೋಜಿಸುವ ವ್ಯಾಪಕ ಶ್ರೇಣಿಯ ಉಪಕ್ರಮಗಳನ್ನು ಮುನ್ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.