ADVERTISEMENT

ಕೈಲಾಸ ಮಾನಸ ಸರೋವರ ಯಾತ್ರೆ: ಭಾರತ–ಚೀನಾ ತಯಾರಿ

ಪಿಟಿಐ
Published 28 ಏಪ್ರಿಲ್ 2025, 16:04 IST
Last Updated 28 ಏಪ್ರಿಲ್ 2025, 16:04 IST
ಕೈಲಾಸ ಪರ್ವತ ಫೈಲ್ ಚಿತ್ರ
ಕೈಲಾಸ ಪರ್ವತ ಫೈಲ್ ಚಿತ್ರ   

ಬೀಜಿಂಗ್: ಐದು ವರ್ಷಗಳ ನಂತರ ಈ ಬೇಸಿಗೆಯಲ್ಲಿ (ಜೂನ್‌ನಿಂದ) ಕೈಲಾಸ ಮಾನಸ ಸರೋವರ ಯಾತ್ರೆ ಆರಂಭಗೊಳ್ಳಲಿದೆ. ಭಾರತೀಯ ಯಾತ್ರಾರ್ಥಿಗಳು ಕೈಗೊಳ್ಳುವ ಮಾನಸ ಸರೋವರ ಯಾತ್ರೆಗೆ ಚೀನಾ ಮತ್ತು ಭಾರತ ಪೂರ್ವ ತಯಾರಿ ಆರಂಭಿಸಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಸೋಮವಾರ ತಿಳಿಸಿದೆ.

2020ರಲ್ಲಿ ಮಾನಸ ಸರೋವರ ಯಾತ್ರೆಯನ್ನು ಕೋವಿಡ್ ಮತ್ತು ಉಭಯ ದೇಶಗಳ ಗಡಿಯಲ್ಲಿ ಸೇನಾ ಸಂಘರ್ಷದ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು. 

ಚೀನಾದ ಸ್ವಾಯತ್ತ ಪ್ರದೇಶವಾದ ಟಿಬೆಟ್‌ನಲ್ಲಿರುವ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಭಾರತದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಇದು ಎರಡೂ ದೇಶಗಳ ಜನರ ಸಾಂಸ್ಕೃತಿಕ ವಿನಿಮಯದ ಪ್ರಮುಖ ಭಾಗವಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಗೋ ಜೈಕುನ್‌ ತಿಳಿಸಿದ್ದಾರೆ.

ADVERTISEMENT

ಟಿಬೆಟ್ಟಿನ ಬೌದ್ಧರು ಮತ್ತು ಭಾರತದ ಹಿಂದೂಗಳು ಸೇರಿ ಹಲವು ಧರ್ಮದವರಿಗೆ ಈ ಪರ್ವತ ಮತ್ತು ಸರೋವರ ಶ್ರದ್ಧಾ ಕೇಂದ್ರವಾಗಿದೆ.

ಈ ವರ್ಷ ಭಾರತ ಮತ್ತು ಚೀನಾದ ರಾಜತಾಂತ್ರಿಕ ಒಪ್ಪಂದಕ್ಕೆ 75 ವರ್ಷ ತುಂಬಲಿದೆ. ಹಾಗಾಗಿ ಬೀಜಿಂಗ್ ಮತ್ತು ನವದೆಹಲಿ ಸಮಾನ ತಿಳಿವಳಿಕೆಯೊಂದಿಗೆ ಹೆಜ್ಜೆ ಇಡಲು ಬಯಸುತ್ತವೆ. ಉಭಯ ದೇಶಗಳ ಸಂಬಂಧ ಸುಧಾರಣೆಯಲ್ಲಿ ಪ್ರಬಲ ಮತ್ತು ಸುಸ್ಥಿರ ಬೆಳವಣಿಗೆಗೆ ನಾಯಕರು ಕಟಿಬದ್ಧರಾಗಿದ್ದಾರೆ ಎಂದು ಗೋ ಜೈಕುನ್‌ ಹೇಳಿದ್ದಾರೆ. 

ಜೂನ್‌ನಿಂದ ಆಗಸ್ಟ್‌ವರೆಗೆ ಮಾನಸ ಸರೋವರ ಯಾತ್ರೆಯು ಉತ್ತರಾಖಂಡದ ಲಿಪುಲೇಕ್ ಪಾಸ್‌ ಮತ್ತು ಸಿಕ್ಕಿಂನ ನಾಥು ಲಾ ಮಾರ್ಗಗಳಿಂದ ಶುರುವಾಗಲಿದೆ. ಹಿಂದೂ, ಜೈನ ಮತ್ತು ಬೌದ್ಧ ಧರ್ಮೀಯರು ಯಾತ್ರೆ ಕೈಗೊಳ್ಳಲಿದ್ದಾರೆ. ತಲಾ 50 ಸದಸ್ಯರ 15 ತಂಡಗಳು ಎರಡೂ ಮಾರ್ಗಗಳಿಂದ ಯಾತ್ರೆ ತೆರಳಲಿವೆ ಎಂದು ಏಪ್ರಿಲ್‌ 26ರಂದು ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿತ್ತು.

ರಷ್ಯಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮಾತುಕತೆ ನಡೆಸಿದ ನಂತರ ಎರಡೂ ದೇಶಗಳ ಸಂಬಂಧ ಸುಧಾರಿಸುವ ನಿರ್ಧಾರ ಆಗಿತ್ತು. ಮಾನಸ ಸರೋವರ ಯಾತ್ರೆಯು ಭಾರತ–ಚೀನಾ ಸಂಬಂಧ ಸುಧಾರಣೆಯ ಹೆಜ್ಜೆಗಳಲ್ಲಿ ಒಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.