ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಾಖಿ ಅವರ ಸುದ್ದಿಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟದ್ದು ಏಕೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವೇನು ಎಂದೂ ಕೇಳಿರುವ ಸಂಸದೆ, ಇದು ದೇಶದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ, 'ಪ್ರಧಾನಿ ಮೋದಿ ಅವರೇ, ಭಾರತಕ್ಕೆ ಭೇಟಿ ನೀಡಿರುವ ತಾಲಿಬಾನ್ ಪ್ರತಿನಿಧಿಯ ಪ್ರತಿಕಾಗೋಷ್ಠಿಯಿಂದ ಮಹಿಳೆಯರನ್ನು ದೂರವಿರಿಸಿದ ಬಗ್ಗೆ ನಿಮ್ಮ ನಿಲುವು ಏನು ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ' ಎಂದಿದ್ದಾರೆ.
'ಚುನಾವಣೆಯಿಂದ ಚುನಾವಣೆಗೆ ಮಹಿಳೆಯರ ಹಕ್ಕುಗಳು ನಿಮಗೆ ನೆರವಾಗದಿರಬಹುದು. ಆದರೆ, ಸ್ತ್ರೀಯರೇ ಹೆಮ್ಮೆ ಹಾಗೂ ಬೆನ್ನೆಲುಬಾಗಿರುವ ದೇಶದಲ್ಲಿ ಅತ್ಯಂತ ಸಮರ್ಥ ಮಹಿಳೆಯರಿಗೆ ಇಂಥ ಅವಮಾನ ಆಗಲು ಹೇಗೆ ಸಾಧ್ಯವಾಯಿತು' ಎಂದು ಪ್ರಶ್ನಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ನವದೆಹಲಿಯಲ್ಲಿರುವ ಅಫ್ಗಾನಿಸ್ತಾನ ರಾಯಭಾರ ಕಚೇರಿಯಲ್ಲಿ ಶುಕ್ರವಾರ ನಡೆದ ದೀರ್ಘ ಮಾತುಕತೆ ಬಳಿಕ ಮುತ್ತಾಖಿಯವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು. ಈ ವೇಳೆ, ಸೀಮಿತ ಪತ್ರಕರ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಮಹಿಳೆಯರ ಅನುಪಸ್ಥಿತಿ ಎದ್ದುಕಾಣುತ್ತಿತ್ತು.
ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿ ಮಹಿಳಾ ಪತ್ರಕರ್ತರು ಇರಬೇಕು ಎಂಬುದಾಗಿ ಆಫ್ಗನ್‌ಗೆ ಭಾರತ ಹೇಳಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ. ಆದಾಗ್ಯೂ, ಸುದ್ದಿಗೋಷ್ಠಿಯಲ್ಲಿ ಯಾರು ಭಾಗವಹಿಸಬೇಕು ಎಂಬುದನ್ನು ತಾಲಿಬಾನ್ ಅಧಿಕಾರಿಗಳು ವಿದೇಶಾಂಗ ಸಚಿವರೊಂದಿಗೆ ಸೇರಿ ನಿರ್ಧರಿಸಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.