ಮಥುರಾ: ಪೌರತ್ವ ತಿದ್ದುಪಡಿ ಕಾಯ್ದೆ ನಂತರ ಕೇಂದ್ರವು ಜನಸಂಖ್ಯಾ ನಿಯಂತ್ರಣಾ ಕಾಯಿದೆ ಜಾರಿಗೆ ತರುವ ಸಾಧ್ಯತೆಗಳಿವೆ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಹೇಳಿದ್ದಾರೆ.
‘ನಾನು ಈ ವಿಚಾರದ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆಯನ್ನೂ ಮಾಡಿದ್ದೇನೆ,’ ಎಂದೂ ಅವರು ಹೇಳಿಕೊಂಡಿದ್ದಾರೆ.
ಮಥುರಾದ ಚೈತನ್ಯ ವಿಹಾರದಲ್ಲಿರುವ ವಾಮದೇವ ಜೋತಿರ್ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದರು.
‘ಜನಸಂಖ್ಯಾ ನಿಯಂತ್ರಣದಂಥ ಕಾನೂನಿನ ಅಗತ್ಯದ ಕುರಿತು ಮೋದಿ ಚರ್ಚೆ ಮಾಡಿದ್ದಾರೆ. ಆದರೆ, ಈ ಕಾನೂನಿನ ಜಾರಿ ವಿಚಾರವು ಸಂಪೂರ್ಣವಾಗಿ ಪ್ರಧಾನಿಯವರಿಗೇ ಬಿಟ್ಟ ವಿಚಾರ,’ ಎಂದು ನಿರಂಜನ ಜ್ಯೋತಿ ಹೇಳಿದರು.
‘ಜಮ್ಮು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂಬಂಥ ಕಾಲವಿತ್ತು. ಅದನ್ನು ಮುಟ್ಟಿದರೆ ರಕ್ತದ ಹೊಳೆ ಹರಿಯುವ ಭಯವಿತ್ತು. ಆದರೆ, ಅಂಥದ್ದನ್ನೇ ಸರ್ಕಾರ ಜಾರಿ ಮಾಡಿ ತೋರಿಸಿದೆ. ದೇಶದ ಹಿತಕ್ಕಾಗಿ ಅಗತ್ಯವಿರುವ ಯಾವುದೇ ಕಾನೂನನ್ನೂ ಮೋದಿ ಸರ್ಕಾರ ಜಾರಿಗೆ ತರಬಲ್ಲದು,’ ಎಂದೂ ಜ್ಯೋತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.