ADVERTISEMENT

ಮುಂಬೈ ದಾಳಿ ಬಳಿಕ ಯುಪಿಎ ಸರ್ಕಾರದ ನಿಲುವಿಗೆ ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 10:29 IST
Last Updated 23 ನವೆಂಬರ್ 2021, 10:29 IST
ಮನೀಶ್‌ ತಿವಾರಿ
ಮನೀಶ್‌ ತಿವಾರಿ   

ನವದೆಹಲಿ: 26/11 ಮುಂಬೈ ದಾಳಿ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದೆ ರಾಷ್ಟ್ರೀಯ ಭದ್ರತೆಯನ್ನು ಪಣಕ್ಕಿಟ್ಟಿತು ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.

ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಅವರ ಹೊಸ ಪುಸ್ತಕದಲ್ಲಿದೆ ಎನ್ನಲಾದ ಕೆಲವು ಅಂಶಗಳನ್ನು ಬಿಜೆಪಿ ಪ್ರಸ್ತಾಪಿಸಿದೆ. ಈ ಪುಸ್ತಕ ಡಿಸೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ‘ಯುಪಿಎ ಸರ್ಕಾರ ನಿರುಪಯೋಗಿಯಾಗಿತ್ತು ಎಂಬುದನ್ನು ಪುಸ್ತಕದಲ್ಲಿನ ಅಂಶಗಳು ದೃಢಪಡಿಸುತ್ತವೆ’ ಎಂದಿದ್ದಾರೆ.

ADVERTISEMENT

ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಮನೀಶ್‌ ತಿವಾರಿ ಅವರು,‘1– ಫ್ಲ್ಯಾಶ್‌ ಪಾಯಿಂಟ್ಸ್‌; 20 ಇಯರ್ಸ್‌– ನ್ಯಾಷನಲ್‌ ಸೆಕ್ಯುರಿಟಿ ಸಿಚುಯೇಶನ್ಸ್‌ ದಟ್‌ ಇಂಪ್ಯಾಕ್ಟೆಟ್‌ ಇಂಡಿಯಾ’ ಎಂಬತಮ್ಮ ಹೊಸ ಪುಸ್ತಕದಲ್ಲಿ, ಮುಂಬೈ ದಾಳಿ ಬಳಿಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ನಿಷ್ಕ್ರಿಯತೆ ತೋರಿತು ಎಂದು ಟೀಕಿಸಿರುವುದಾಗಿ ವರದಿಯಾಗಿದೆ.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸೂಕ್ಷ್ಮ ಸಂದರ್ಭವನ್ನು ಸರಿಯಾಗಿ ಗ್ರಹಿಸಲಿಲ್ಲ, ರಾಷ್ಟ್ರೀಯ ಭದ್ರತೆಯ ಬಗ್ಗೆಯೂ ಕಾಳಜಿ ವಹಿಸಲಿಲ್ಲ ಎಂಬುದನ್ನು ತಿವಾರಿ ಪುಸ್ತಕ ದೃಢಪಡಿಸಿದೆ‘ ಎಂದು ಭಾಟಿಯಾ ಹೇಳಿದ್ದಾರೆ.

ಯುಪಿಎ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ಪಣಕ್ಕಿಟ್ಟಿತ್ತು ಎಂದೂ ಅವರು ಆರೋಪಿಸಿದ್ದಾರೆ.

ತಿವಾರಿ ಅವರು ಮಂಗಳವಾರ, ತಮ್ಮ ಪುಸ್ತಕ ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಟ್ವೀಟ್‌ ಮಾಡಿದ್ದರು.

2008ರ ನವೆಂಬರ್‌ 26ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.