ಅಖಿಲೇಶ್ ಯಾದವ್
ಲಖನೌ: ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಬಡವರು ಮತ್ತು ದುರ್ಬಲ ವರ್ಗಗಳ ವಿರುದ್ಧ ಅನ್ಯಾಯ ಎಸಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ನಡೆದ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್, ‘ಲಖನೌದಲ್ಲಿ, ಪೊಲೀಸರು ಇ–ರಿಕ್ಷಾ ಚಾಲಕನನ್ನು ಕ್ರೂರವಾಗಿ ಥಳಿಸಿದ್ದು, ಅವನು ಪ್ರಜ್ಞಾಹೀನನಾಗಿದ್ದನು. ಚಿತ್ರಕೂಟದಲ್ಲಿ, ವ್ಯಕ್ತಿಯೊಬ್ಬರು ಸಾಲ ಮಾಡಿ ಖರೀದಿಸಿದ್ದ ರಿಕ್ಷಾವನ್ನು ಭ್ರಷ್ಟ ಅಧಿಕಾರಿಯೊಬ್ಬರು ವಶಪಡಿಸಿಕೊಂಡು, ₹50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ಸಾಧ್ಯವಾಗದೆ, ಚಾಲಕ ಆತ್ಮಹತ್ಯೆ ಮಾಡಿಕೊಂಡನು. ಇಂತಹ ಅಪರಾಧಗಳ ಅಪರಾಧಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.
‘ಜನರು ವಿಧಾನಸಭೆಯ ಹೊರಗೆ ಮತ್ತು ಮುಖ್ಯಮಂತ್ರಿ ನಿವಾಸದ ಬಳಿಯೂ ಬೆಂಕಿ ಹಚ್ಚಿಕೊಂಡಿರುವ ಘಟನೆಗಳು ನಡೆದಿವೆ. ಬಿಜೆಪಿಯ ಅಮಾನವೀಯ ಆಡಳಿತಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಇನ್ನೊಂದಿಲ್ಲ?’ ಎಂದು ಅವರು ಹೇಳಿದ್ದಾರೆ.
‘ಬಿಜೆಪಿ ಆಡಳಿತದಲ್ಲಿ ರೈತರು, ಯುವಕರು, ವ್ಯಾಪಾರಿಗಳು ಮತ್ತು ಬಡವರು ಕಷ್ಟಪಡುತ್ತಿದ್ದಾರೆ. ಸರ್ಕಾರ ಮತ್ತು ಅದರ ಬೆಂಬಲಿಗರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಮಹಿಳೆಯರು ಮತ್ತು ಯುವತಿಯರು ಪ್ರತಿದಿನ ಅವಮಾನಕ್ಕೊಳಗಾಗುತ್ತಿದ್ದಾರೆ. ಪೊಲೀಸ್ ಠಾಣೆಗಳು ಸಹ ಸಂತ್ರಸ್ತರಿಗೆ ಅಸುರಕ್ಷಿತವಾಗಿವೆ ಮತ್ತು ಕಸ್ಟಡಿ ಸಾವುಗಳಲ್ಲಿ ಉತ್ತರ ಪ್ರದೇಶವು ಮುಂಚೂಣಿಯಲ್ಲಿದೆ’ ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಅಪರಾಧಿಗಳಿಗೆ ಆಶ್ರಯ ನೀಡುತ್ತಿದೆ. ಜನರು ಸರ್ಕಾರದ ದೌರ್ಜನ್ಯದಿಂದ ಬಳಲುತ್ತಿದ್ದಾರೆ, ನ್ಯಾಯವನ್ನು ಹುಡುಕುತ್ತಿದ್ದಾರೆ. 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಈ ಸರ್ಕಾರವನ್ನು ತೆಗೆದುಹಾಕುತ್ತಾರೆ. ಸರ್ಕಾರದ ಅನ್ಯಾಯ ಹಾಗೂ ದಬ್ಬಾಳಿಕೆಯ ಆಡಳಿತವನ್ನು ಕೊನೆಗೊಳಿಸುತ್ತಾರೆ ಎಂದು ಅಖಿಲೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.