ಲಖನೌ: ಸಂಸತ್‌ನಲ್ಲಿ ಮೇವಾಡದ ಅರಸ ರಾಣಾ ಸಂಗಾ ಅವರನ್ನು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮ್‌ಜಿ ಲಾಲ್ ಸುಮನ್ ಅವರು ‘ದೇಶದ್ರೋಹಿ’ ಎಂದಿದ್ದು, ಎಸ್‌ಪಿ– ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
‘ಬಿಜೆಪಿ ನಾಯಕರು ಔರಂಗಜೇಬ್ ಕುರಿತಂತೆ ಚರ್ಚಿಸಲು ಇತಿಹಾಸವನ್ನು ಮರುಪರಿಶೀಲಿಸಬಹುದಾದರೆ, ಸುಮನ್ ಸಹ ಅದೇ ಇತಿಹಾಸದ ಒಂದು ಪುಟವನ್ನು ಉಲ್ಲೇಖಿಸಿದ್ದಾರೆ’ ಎಂದು ಅಖಿಲೇಶ್ ಯಾದವ್ ತಮ್ಮ ಪಕ್ಷದ ಸಂಸದನ ಹೇಳಿಕೆಯನ್ನು ಸುದ್ದಿಗಾರರ ಬಳಿ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಗರು ಛತ್ರಪತಿ ಶಿವಾಜಿಗೆ ಅವಮಾನ ಮಾಡಿದ್ದಾರೆ ಎಂದು ಹಿಂದಿನ ಘಟನೆಯನ್ನು ಉಲ್ಲೇಖಿಸಿದ್ದಾರೆ.
ಅಖಿಲೇಶ್ ಯಾದವ್ ಸಮರ್ಥನೆಗೆ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದು, ಸಮಾಜವಾದಿ ಪಕ್ಷದ ಹಿಂದೂ ವಿರೋಧಿ ಮನಃಸ್ಥಿತಿಯಿದು ಎಂದು ಕಿಡಿಕಾರಿದ್ದಾರೆ. ಹಿಂದೂ ಸಮುದಾಯಕ್ಕೆ ಹಾಗೂ ರಜಪೂತರಿಗೆ ಮಾಡಿದ ಅವಮಾನ ಎಂದಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸುಮನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಯಾದವ್ ಹೇಳಿಕೆಗೆ ಅಮಿತ್ ಮಾಳವೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.
ರಾಜ್ಯಸಭೆಯಲ್ಲಿ ಮಾರ್ಚ್ 21ರಂದು ಮಾತನಾಡಿದ್ದ ಸುಮನ್, ‘ಬಾಬರ್‌ನನ್ನು ಭಾರತಕ್ಕೆ ಕರೆತಂದವರು ಯಾರು? ಇಬ್ರಾಹಿಂ ಲೋಧಿಯನ್ನು ಸೋಲಿಸಲು ಬಾಬರ್‌ಗೆ ಆಹ್ವಾನ ನೀಡಿದ್ದು ರಾಣಾ ಸಂಗಾ. ಮುಸ್ಲಿಮರು ಬಾಬರ್‌ನ ಸಂತತಿ ಆದರೆ, ಹಿಂದೂಗಳು ದೇಶದ್ರೋಹಿ ರಾಣಾ ಸಂಗಾನ ವಂಶಸ್ಥರೇ? ನಾವು ಬಾಬರ್‌ನನ್ನು ಟೀಕಿಸುತ್ತೇವೆ. ಆದರೆ ರಾಣಾನನ್ನು ಟೀಕಿಸಲ್ಲ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.