ADVERTISEMENT

ಅಲಹಾಬಾದ್‌ ವಿವಿ ಶುಲ್ಕ ಹೆಚ್ಚಳ ಖಂಡಿಸಿ ಜೀವಂತ ಸಮಾಧಿಗೆ ಮುಂದಾದ ವಿದ್ಯಾರ್ಥಿಗಳು

ಪಿಟಿಐ
Published 28 ಸೆಪ್ಟೆಂಬರ್ 2022, 7:38 IST
Last Updated 28 ಸೆಪ್ಟೆಂಬರ್ 2022, 7:38 IST
ಜೀವಂತ ಸಮಾಧಿಗೆ ಯತ್ನಿಸಿದ ವಿದ್ಯಾರ್ಥಿಗಳು- ಚಿತ್ರ– ಪಿಟಿಐ
ಜೀವಂತ ಸಮಾಧಿಗೆ ಯತ್ನಿಸಿದ ವಿದ್ಯಾರ್ಥಿಗಳು- ಚಿತ್ರ– ಪಿಟಿಐ   

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಇಲ್ಲಿನಯುನಿವರ್ಸಿಟಿ ಆಫ್ ಅಲಹಾಬಾದ್‌ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವನ್ನು ಶೇ 300 ರಿಂದ 400 ರಷ್ಟು ಹೆಚ್ಚಳ ಮಾಡಿರುವುದು ಕಿಡಿ ಹೊತ್ತಿಸಿದೆ.

ವಿವಿಯ ಈ ನಡೆ ಖಂಡಿಸಿ ವಿದ್ಯಾರ್ಥಿಗಳು ಎನ್‌ಎಸ್‌ಯುಐ ನೇತೃತ್ವದಲ್ಲಿ ಕಳೆದ ಎರಡು ವಾರಗಳಿಂದ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳವಾರ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು 5 ಅಡಿ ಆಳದ ಗುಂಡಿಗಳನ್ನು ತೆಗೆದು ಜೀವಂತಸಮಾಧಿಯಾಗಲು ಯತ್ನಿಸಿದರು. ಕೆಲವರು ಗುಂಡಿಗಳಿಗೆ ಇಳಿದು ಮಣ್ಣು ಎಳೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ಮೇಲೆ ಎಳೆದೊಯ್ದಿದ್ದಾರೆ.

ADVERTISEMENT

ಶುಲ್ಕ ಹೆಚ್ಚಳವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಹಿಂಪಡೆಯದಿದ್ದರೇ ನಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಆದರೆ, ಶುಲ್ಕ ಹೆಚ್ಚಳದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಯುನಿವರ್ಸಿಟಿ ಆಫ್ ಅಲಹಾಬಾದ್‌ ಮುಖ್ಯಸ್ಥರು ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಇದು ಹೊಸ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಶುಲ್ಕ ಹೆಚ್ಚಳವಾಗಿದೆ ಎಂದಿದ್ದಾರೆ.

ಇಷ್ಟುದಿನಯುನಿವರ್ಸಿಟಿ ಆಫ್ ಅಲಹಾಬಾದ್‌ನಲ್ಲಿ ಸಾಮಾನ್ಯವಾಗಿ ಪದವಿ ಕೋರ್ಸುಗಳಿಗೆ ₹1000 ಇತ್ತು. ಈಗ ಅದನ್ನು ₹4000 ಕ್ಕೂ ಮೀರಿ ಹೆಚ್ಚಿಸಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಶುಲ್ಕ ಹೆಚ್ಚಳ ಖಂಡಿಸಿ ವಿವಿ ಕ್ಯಾಂಪಸ್‌ನಲ್ಲಿ ಎಬಿವಿಪಿ ಕೂಡ ಪ್ರತಿಭಟನೆ ನಡೆಸುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಶುಲ್ಕ ಹೆಚ್ಚಳವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.