ಚಂಡೀಗಡ:ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಅವರು ‘ಪಂಜಾಬ್ ಡಾ ಕ್ಯಾಪ್ಟನ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
‘ಪಟಿಯಾಲವು 400 ವರ್ಷಗಳಿಂದ ನಮ್ಮ ಜತೆಗಿದೆ. ಅವರಿಗಾಗಿ (ನವಜೋತ್ ಸಿಂಗ್ ಸಿಧು) ಅದನ್ನು ಬಿಟ್ಟುಕೊಡಲಾರೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಪಟಿಯಾಲ ವಿಧಾನಸಭಾ ಕ್ಷೇತ್ರವು ಅಮರಿಂದರ್ ಸಿಂಗ್ ಕುಟುಂಬದ ಭದ್ರಕೋಟೆ ಎಂದೇ ಹೇಳಲಾಗಿದೆ. ಅವರು 2002, 2007, 2012 ಮತ್ತು 2017ರಲ್ಲಿ ಪಟಿಯಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
2014ರಲ್ಲಿ ಲೋಕಸಭೆಗೆ ಆಯ್ಕೆಯಾದ ಬಳಿಕ ಅಮರಿಂದರ್ ಅವರು ಪಟಿಯಾಲದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಪತ್ನಿ ಪ್ರಿನೀತ್ ಕೌರ್ ಸ್ಪರ್ಧಿಸಿ ಜಯ ಗಳಿಸಿದ್ದರು.
ಸಾಧ್ಯವಿದ್ದರೆ ಪಟಿಯಾಲದಿಂದ ಸ್ಪರ್ಧಿಸಿ, ನೀವು ಠೇವಣಿಯನ್ನೂ ಕಳೆದುಕೊಳ್ಳಲಿದ್ದೀರಿ ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರಿಗೆ ಏಪ್ರಿಲ್‌ನಲ್ಲಿ ಅಮರಿಂದರ್ ಸವಾಲು ಹಾಕಿದ್ದರು.
ಸಿಧು ಜತೆಗಿನ ಭಿನ್ನಾಭಿಪ್ರಾಯ, ಕಾಂಗ್ರೆಸ್ ಆಂತರಿಕ ಕಲಹದಿಂದಾಗಿ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ರಾಜೀನಾಮೆ ನೀಡಿದ್ದರು. ಚರಣ್‌ಜೀತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಬಳಿಕ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಿದ್ದ ಅಮರಿಂದರ್, ಪಂಜಾಬ್ ಲೋಕ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.