ADVERTISEMENT

ಬಿಟ್‌ ಕಾಯಿನ್‌ ಹಗರಣ: ವದಂತಿ ಹಬ್ಬಿಸುವ ಬಿಜೆಪಿ ಮುಖಂಡರಿಗೆ ಲಗಾಮು- ಶಾ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 21:34 IST
Last Updated 14 ನವೆಂಬರ್ 2021, 21:34 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ವದಂತಿ ಹಬ್ಬಿಸುತ್ತಿರುವ ಕರ್ನಾಟಕದ ಬಿಜೆಪಿ ಮುಖಂಡರನ್ನು ಹತೋಟಿಯಲ್ಲಿಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸೂಚಿಸಿದ್ದಾರೆ.

ಕಳೆದ ವಾರ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಬ್ಬರು ಸಚಿವರು ಸೇರಿದಂತೆ ತಮ್ಮದೇ ಪಕ್ಷದ ಮುಖಂಡರು ತಮ್ಮ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವದಂತಿ ಹಬ್ಬಿಸುತ್ತಿದ್ದಾರೆ. ಅವರೇ ಕಾಂಗ್ರೆಸ್‌ ನಾಯಕರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ತೆರನಾದ ವದಂತಿಗಳೇ ಕಾಂಗ್ರೆಸ್‌ ನಾಯಕರ ವಾಗ್ದಾಳಿಗೆ ಆಹಾರವಾಗಿವೆ. ಹೀಗಾಗಿ, ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕೆಲವು ಸಚಿವರು ಹಾಗೂ ಮುಖಂಡರಿಗೆ ಎಚ್ಚರಿಕೆ ನೀಡುವಂತೆ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಅಂಥ ನಾಯಕರನ್ನು ಹದ್ದುಬಸ್ತಿನಲ್ಲಿಡುವ ವಿಚಾರವನ್ನು ಪಕ್ಷ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದ ಅಮಿತ್‌ ಶಾ, ಬಿಟ್‌ ಕಾಯಿನ್‌ ವಿಷಯವಾಗಿ ಕಾಂಗ್ರೆಸ್‌ ಪಕ್ಷದ ಆರೋಪಕ್ಕೆ ತಕ್ಕ ತಿರುಗೇಟು ನೀಡಬೇಕು ಎಂದು ಸೂಚಿಸಿದ್ದರು. ಬೊಮ್ಮಾಯಿ ಸಮಕ್ಷಮದಲ್ಲೇ ನಡ್ಡಾ ಅವರಿಗೆ ಕರೆ ಮಾಡಿ, ವದಂತಿ ಹಬ್ಬಿಸುತ್ತಿರುವ ನಾಯಕರಿಗೆ ಲಗಾಮು ಹಾಕುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಆ ಬಳಿಕ ಬೊಮ್ಮಾಯಿ ಅವರು, ನಡ್ಡಾ ಅವರನ್ನೂ ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.