ADVERTISEMENT

ಎಸ್‌ಪಿ ಆಳ್ವಿಕೆಯಲ್ಲಿ ಮೊಹರಂಗೆ ವಿದ್ಯುತ್‌, ರಾಮನವಮಿಗೆ ಇಲ್ಲ: ಸಚಿವ ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 21:00 IST
Last Updated 27 ಫೆಬ್ರುವರಿ 2022, 21:00 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ    

ಬಲಿಯಾ (ಉತ್ತರ ಪ್ರದೇಶ) (ಪಿಟಿಐ): ಸಮಾಜವಾದಿ ಪ‍ಕ್ಷದ ಸರ್ಕಾರ ಇದ್ದಾಗ ಓಲೈಕೆ ರಾಜಕಾರಣ ಮಾಡಲಾಗುತ್ತಿತ್ತು ಎಂದು
ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ. ಆಗ, ಮೊಹರಂ ದಿನ ವಿದ್ಯುತ್‌ ಪೂರೈಕೆ ಇರುತ್ತಿತ್ತು. ಆದರೆ, ರಾಮನವಮಿ ಮತ್ತು ಶ್ರೀ ಕೃಷ್ಣ ಜನ್ಮೋತ್ಸವದ ದಿನ ವಿದ್ಯುತ್‌ ಪೂರೈಕೆ ಇರುತ್ತಿರಲಿಲ್ಲ ಎಂದು ಶಾ ಆರೋಪಿಸಿದ್ದಾರೆ.

ಎಸ್‌ಪಿ ಮತ್ತೆ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಚುನಾವಣಾ ಪ್ರಚಾರ ಸಭೆ
ಯಲ್ಲಿ ಶಾ ಹೇಳಿದ್ದಾರೆ.

‘ಅಖಿಲೇಶ್‌ ಯಾದವ್‌ ಅವರ ಗೂಂಡಾಗಳು ಬುಂದೇಲ್‌ಖಂಡದಲ್ಲಿ ನಾಡ ಪಿಸ್ತೂಲುಗಳು ಮತ್ತು ಗುಂಡುಗಳನ್ನು ಮಾಡುತ್ತಿದ್ದರು. ಸಮಾಜವಾದಿ ಪಕ್ಷವು ಯುವ ಜನರನ್ನು ಅಪರಾಧ ಜಗತ್ತಿಗೆ ತಳ್ಳಿದೆ. ನರೇಂದ್ರ ಮೋದಿ ಅವರು ಮಾಡಿದ ವ್ಯವಸ್ಥೆಯಿಂದಾಗಿ ಬುಂದೇಲ್‌ಖಂಡದಲ್ಲಿ ತಯಾರಾದ ಷೆಲ್‌ಗಳಿಂದ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುವುದು ಸಾಧ್ಯವಾಗಿದೆ’ ಎಂದರು.

ADVERTISEMENT

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ. ಈಗಾಗಲೇ ನಡೆದಿರುವ ನಾಲ್ಕು ಹಂತಗಳ ಮತದಾನವು ಅದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಶಾ ಹೇಳಿದರು.

ಉತ್ತರ ಪ್ರದೇಶ– ಶೇ 54ರಷ್ಟು ಮತದಾನ: ಉತ್ತರ ಪ್ರದೇಶ ವಿಧಾನಸಭೆಯ 54 ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನದಲ್ಲಿ ಶೇ 54ರಷ್ಟು ಜನರು ಮತ ಚಲಾಯಿಸಿದ್ದಾರೆ. 12 ಜಿಲ್ಲೆಗಳ 61 ಕ್ಷೇತ್ರಗಳಿಗೆ ಮತದಾನ ನಡೆಯಿತು.

ಪ್ರತಾಪ್‌ಗಡದ ಕುಂಡಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಗುಲ್ಷನ್ ಯಾದವ್ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದ ಘಟನೆ ಹೊರತುಪಡಿಸಿದರೆ, ಮತದಾನ ಬಹುತೇಕ ಶಾಂತಿಯುತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.